ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಬೈಜಾಲ್ ಆಯ್ಕೆ
Update: 2016-12-28 23:31 IST
ಹೊಸದಿಲ್ಲಿ, ಡಿ.28: ದಿಲ್ಲಿಯ ಮುಂದಿನ ಲೆಫ್ಟಿನೆಂಟ್ ಗವರ್ನರ್ ಆಗಿ ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಅನಿಲ್ ಬೈಜಾಲ್‌ರ ಹೆಸರನ್ನು ಕೇಂದ್ರ ಸರಕಾರ ಅಂತಿಮಗೊಳಿಸಿದೆಯೆಂದು ಎಚ್‌ಟಿಗೆ ಬುಧವಾರ ಮೂಲಗಳು ತಿಳಿಸಿವೆ.
ಹಿಂದಿನ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್‌ರ ಅಚ್ಚರಿಯ ರಾಜೀನಾಮೆಯ 5 ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಸರಕಾರವು ಜಂಗ್‌ರ ರಾಜೀನಾಮೆಯನ್ನು ರಾಷ್ಟ್ರಪತಿಯ ಮಂಜೂರಾತಿಗಾಗಿ ಕಳುಹಿಸಿದೆಯೆಂದು ಅವು ಹೇಳಿವೆ.
ಕೇಂದ್ರಾಡಳಿತ ಪ್ರದೇಶ ಕೇಡರ್‌ನ, 1969ರ ತಂಡದ ಐಎಎಸ್ ಅಧಿಕಾರಿ ಬೈಜಾಲ್‌ರನ್ನು 2004ರ ಮೇಯಲ್ಲಿ ಅಧಿಕಾರಕ್ಕೇರಿದ್ದ ಯುಪಿಎ ಸರಕಾರ ಕೇಂದ್ರ ಗೃಹ ಕಾರ್ಯದರ್ಶಿಯ ಸ್ಥಾನದಿಂದ ತೆಗೆದಿತ್ತು. 2006ರಲ್ಲಿ ಅವರು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. ಬಳಿಕ ಬೈಜಾಲ್ ಹಲವು ಕಾರ್ಪೊರೇಟ್ ಸಂಸ್ಥೆಗಳ ಆಡಳಿತ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ್ದರು.