ಫ್ಲಾಟ್‌ನೊಳಗೆ 140 ವಿಷ ಸರ್ಪಗಳು
ಪುಣೆ, ಡಿ.29: ಸಾರಾ ಸಿಟಿ ಕಟ್ಟಡದ ಫ್ಲಾಟೊಂದರಲ್ಲಿ 144 ವಿಷಸರ್ಪಗಳು ಪತ್ತೆಯಾಗಿರುವುದರಿಂದ ಪ್ರಸಿದ್ಧ ಖರಬವಾಡಿ ಗ್ರಾಮದಲ್ಲಿ ವಾಸವಿರುವ ಜನತೆ ಭೀತಿಯಿಂದ ಕಂಗೆಟ್ಟಿದ್ದಾರೆ.
ಜನ ವಾಸವಿಲ್ಲದ ಈ ಫ್ಲಾಟ್‌ನಲ್ಲಿ ನೂರಕ್ಕೂ ಹೆಚ್ಚು ನಾಗರಹಾವು ಹಾಗೂ ಇತರ ಬಗೆಯ ವಿಷ ಸರ್ಪಗಳು ಕಂಡುಬಂದಿವೆ. ಪರಿಸ್ಥಿತಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಪಾಳುಬಿದ್ದ ಫ್ಲಾಟ್‌ನಲ್ಲಿ ಶೋಧಕಾರ್ಯ ಕೈಗೊಂಡರು. ಫ್ಲಾಟ್‌ನಲ್ಲಿ 2 ಬಾಟಲಿ ಹಾವಿನ ವಿಷ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಮೂಲದ ವ್ಯಕ್ತಿಯೊಬ್ಬರಿಗೆ ಫ್ಲಾಟ್ ಬಾಡಿಗೆಗೆ ನೀಡಲಾಗಿತ್ತು. ವಾರಕ್ಕೆ ಎರಡು ಬಾರಿ ಈತ ಫ್ಲಾಟ್‌ಗೆ ಭೇಟಿ ನೀಡುತ್ತಿದ್ದ ಎನ್ನಲಾಗಿದ್ದು, ಈ ವ್ಯಕ್ತಿಯು ವಿಷವನ್ನು ಪೂರೈಕೆ ಮಾಡುವ ಜಾಲ ಹೊಂದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಘಟನೆ ಬೆಳಕಿಗೆ ಬಂದ ಬಳಿಕ ಸ್ಥಳೀಯರಿಗೆ ತಮ್ಮ ಸುರಕ್ಷತೆ ಬಗ್ಗೆ ಭೀತಿ ಎದುರಾಗಿದೆ. ಸರ್ಪಗಳನ್ನು ಹಿಡಿದು ಕಾಡಿಗೆ ಬಿಡಲು ಅರಣ್ಯ ಇಲಾಖೆಯ ನೆರವನ್ನು ಪೊಲೀಸರು ಕೋರಿದ್ದಾರೆ. ಗ್ರಾಮಸ್ಥರು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವ ಸಲುವಾಗಿ ಹಾವು ಹಿಡಿಯುವವರ ನೆರವನ್ನೂ ಪೊಲೀಸರು ಕೋರಿದ್ದಾರೆ.