ದಿಲ್ಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಅನಿಲ್ ಬೈಜಲ್ ನೇಮಕ
ಹೊಸದಿಲ್ಲಿ, ಡಿ.29: ಮಾಜಿ ಐಎಎಸ್ ಅಧಿಕಾರಿ ಅನಿಲ್ ಬೈಜಲ್ ಅವರು ನಜಿಬ್ ಜಂಗ್‌ರಿಂದ ತೆರವಾಗಿರುವ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.
ಬೈಜಲ್ ಡಿ.31 ರಂದು ಬೆಳಗ್ಗೆ 11 ಗಂಟೆಗೆ ಅಧಿಕಾರ ಸ್ವೀಕರಿಸಲಿದ್ದಾರೆ.
ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಬೈಜಲ್‌ಗೆ ಸ್ವಾಗತ ಎಂದು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಬುಧವಾರ ಸಂಜೆ ಟ್ವೀಟ್ ಮಾಡಿದ್ದಾರೆ.
ಬೈಜಲ್ ಪ್ರಸ್ತುತ ಹೊಸದಿಲ್ಲಿಯಲ್ಲಿನ ವಿವೇಕಾನಂದ ಇಂಟರ್‌ನ್ಯಾಶನಲ್ ಫೌಂಡೇಶನ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಆ ಫೌಂಡೇಶನ್‌ನ ಕಾರ್ಯಕಾರಿಣಿ ಸಮಿತಿಯಲ್ಲಿದ್ದಾರೆ.
ಗೃಹ ಸಚಿವ ರಾಜ್‌ನಾಥ್ ಸಿಂಗ್ ಎರಡು ದಿನಗಳ ಹಿಂದೆಯೇ ನೇಮಕಾತಿ ಪತ್ರಗಳಿಗೆ ಸಹಿ ಹಾಕಿ ರಾಷ್ಟ್ರಪತಿಯ ಅಂಕಿತಕ್ಕೆ ಬುಧವಾರವೇ ಕಳುಹಿಸಿಕೊಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ಕೇಂದ್ರಾಡಳಿತ ಪ್ರದೇಶ ಕೇಡರ್‌ನ 1969ರ ಐಎಎಸ್ ಅಧಿಕಾರಿ ಬೈಜಲ್ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರದಲ್ಲಿ ಗೃಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2006ರಲ್ಲಿ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿದ್ದರು.
ದಿಲ್ಲಿ ಅಭಿವೃದ್ದಿ ಪ್ರಾಧಿಕಾರದಲ್ಲಿ ಉಪ ಚೇರ್ಮನ್ ಆಗಿಯೂ ಸೇವೆ ಸಲ್ಲಿಸಿದ್ದರು. ಡಿ.22 ರಂದು ರಾಜೀನಾಮೆ ನೀಡಿರುವ ಜಂಗ್ ಉತ್ತರಾಧಿಕಾರಿಯಾಗಿ ಬೈಜಲ್ ಕಾರ್ಯನಿರ್ವಹಿಸಲು ಸಜ್ಜಾಗಿದ್ದಾರೆ. ಮೂರೂವರೆ ವರ್ಷಗಳ ಕಾಲ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಜಂಗ್ ಹಾಗೂ ಆಮ್ ಆದ್ಮಿ ಸರಕಾರದ ನಡುವೆ ಯಾವಾಗಲೂ ಜಂಗೀಕುಸ್ತಿ ನಡೆಯುತ್ತಿತ್ತು.