ಪ್ರಕೃತಿಯಲ್ಲಿ ಪರಮಾತ್ಮನನ್ನು ಕಂಡವರು ಕುವೆಂಪು: ಹರಿನಾರಾಯಣ

Update: 2016-12-29 18:40 GMT

ಪುತ್ತೂರು, ಡಿ.29: ಒಂದು ಶತಮಾನದ ಕಾಲ ಸಾಹಿತ್ಯ ಲೋಕವನ್ನು ಆಳಿದ ಅನಭಿಷಿಕ್ತ ದೊರೆಯಾದ ಕುವೆಂಪು ಅವರು, ಪ್ರಕೃತಿಯಲ್ಲಿ ಪರಮಾತ್ಮನನ್ನು ಕಂಡವರು. ಅವರು ಕನ್ನಡದ ಪರಂಪರೆಗೆ ಉತ್ತರದಾಯಿತ್ವ ನೀಡಿದ್ದು, ಮುಂದಿನ ಪೀಳಿಗೆಗೆ ಸಮರ್ಥ ಕೊಂಡಿಯಾಗಿದ್ದಾರೆ ಎಂದು ಪುತ್ತೂರು ತಾಲೂಕು 16ನೆ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಹರಿನಾರಾಯಣ ಮಾಡಾವು ಹೇಳಿದರು.

ಗುರುವಾರ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಕರ್ನಾಟಕ ಸಂಘದ ಸಹಯೋಗದಲ್ಲಿ ಪುತ್ತೂರು ಪುರಭವನದಲ್ಲಿ ನಡೆದ ರಾಷ್ಟ್ರ ಕವಿ ಕುವೆಂಪು ಜನ್ಮದಿನ ‘ವಿಶ್ವಮಾನವ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ವಿಶ್ವ ಮಾನವ ಸಂದೇಶ ನೀಡಿದರು.

ಕನ್ನಡ ಸಾಹಿತ್ಯ ಲೋಕಕ್ಕೆ 75ಕ್ಕೂ ಅಧಿಕ ಮೇರು ಕೃತಿಗಳನ್ನು ನೀಡಿದ ಮೊದಲ ಬಾರಿ ಜ್ಞಾನ ಪೀಠ ಪ್ರಶಸ್ತಿ ಪಡೆದ ಹಿರಿಮೆ ಕುವೆಂಪು ಅವರಿಗೆ ಸಂದಿದೆ. ನವೋದಯ ಸಂಪ್ರದಾಯದ ಪ್ರವರ್ತಕರಾದ ಅವರ ರಾಮಾಯಣ ದರ್ಶನಂ ಸೇರಿದಂತೆ ಎಲ್ಲ ಕೃತಿಗಳಲ್ಲಿಯೂ ವೈಜ್ಞಾನಿಕ ದೃಷ್ಟಿ ಕೋನ ಮತ್ತು ವಿಶ್ವಮಾನವ ಸಂದೇಶವಿದೆ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಎಂಬ 5 ಮಂತ್ರಗಳು ಕುವೆಂಪು ಅವರ ಕೊಡುಗೆಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ ಕುವೆಂಪು ಬದುಕು ನಮಗೆಲ್ಲರಿಗೂ ದಾರಿ ದೀಪವಾಗಿದೆ ಎಂದರು. ವೇದಿಕೆಯಲ್ಲಿ ತಾಪಂ ಕಾರ್ಯ
 

ನಿರ್ವಹಣಾಧಿಕಾರಿ ಜಗದೀಶ್ ಎಸ್, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್ ಶಶಿಧರ್, ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭ ಹರಿನಾರಾಯಣ ಮಾಡಾವು ಅವರನ್ನು ಕುವೆಂಪು ಹೆಸರಿನಲ್ಲಿ ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ ಸನ್ಮಾನಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಡಬ ಸರಕಾರಿ ಪಪೂ ಕಾಲೇಜು, ಉಪ್ಪಿನಂಗಡಿ ಪಪೂ ಕಾಲೇಜು, ನೆಲ್ಲಿಕಟ್ಟೆ ಡಾ.ಶಿವರಾಮ ಕಾರಂತ ಪ್ರೌಢಶಾಲೆ, ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ರಾಮಕುಂಜದ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆ ವಿದ್ಯಾರ್ಥಿಗಳಿಂದ ಕುವೆಂಪು ಭಾವಗಾನ ನಡೆಯಿತು. ಪುತ್ತೂರು ಶ್ರೀರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಅನಂತಶಂಕರ ಬಿ ಸ್ವಾಗತಿಸಿದರು. ಉಪತಹಶೀಲ್ದಾರ್ ಶ್ರೀಧರ್ ವಂದಿಸಿದರು. ಪ್ರೊ ಬಿ.ಜೆ.ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News