ಕಾರ್ತಿಕ್‌ರಾಜ್ ಹತ್ಯೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ದಕ್ಷಿಣ ಕನ್ನಡಕ್ಕೆ ಬೆಂಕಿ: ಸಂಸದ ನಳಿನ್ ಎಚ್ಚರಿಕೆ

Update: 2017-01-01 11:50 GMT

ಕೊಣಾಜೆ, ಜ.1: ''ಕೊಣಾಜೆಯಲ್ಲಿ ಇತ್ತೀಚೆಗೆ ನಡೆದ ಕಾರ್ತಿಕ್‌ರಾಜ್ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಿದಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಲು ಸಿದ್ಧ'' ಎಂದು ಸಂಸದ ನಳಿನ್ ಕುಮಾರ್ ಕಟೀಲು ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು ತಾಪಂ ಮಾಜಿ ಉಪಾಧ್ಯಕ್ಷ ಉಮೇಶ್ ಗಾಣಿಗ ಅವರ ಪುತ್ರ ಕಾರ್ತಿಕ್‌ರಾಜ್ ಹತ್ಯೆ ಆರೋಪಿಗಳ ಪತ್ತೆಗೆ ಆಗ್ರಹಿಸಿ ಇಂದು ಬೆಳಗ್ಗೆ ಕೊಣಾಜೆ ಪೊಲೀಸ್ ಠಾಣೆಯ ಮುಂಭಾಗದಲ್ಲೇ ನಡೆದ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಅವರು ಉದ್ರೇಕಕಾರಿ ಭಾಷಣ ಮಾಡಿದರು.

ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ತಿಕ್‌ರಾಜ್ ಹತ್ಯೆ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಹಲವು ದುಷ್ಕೃತ್ಯಗಳು ನಡೆಯುತ್ತಿವೆ. ಆದರೆ ಈ ಪ್ರಕರಣಗಳಿಗೆ ಸಂಬಂಧಿಸಿ ಅಪರಾಧಿಗಳನ್ನು ಬಂಧಿಸುವಲ್ಲಿ ಪೊಲೀಸರು ಹಾಗೂ ಸರಕಾರ ವಿಫಲವಾಗಿದೆ. ಈ ಎಲ್ಲಾ ಕ್ರಿಮಿನಲ್ ಚಟುವಟಿಕೆಗಳಿಗೆ ಈ ಭಾಗದ ಶಾಸಕರೇ ನೇರ ಹೊಣೆ ಎಂದು ಆರೋಪಿಸಿದ ಸಂಸದ ನಳಿನ್‌ಕುಮಾರ್, ಇನ್ನೂ 10 ದಿನಗಳ ಒಳಗೆ ಕಾರ್ತಿಕ್‌ರಾಜ್ ಕೊಲೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಆರೋಪಿಗಳನ್ನು ಶೀಘ್ರ ಬಂಧಿಸದಿದ್ದಲ್ಲಿ ಕೊಣಾಜೆ ಠಾಣೆಯೆದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಇಲ್ಲಿ ನಡೆಯುತ್ತಿರುವುದು ಭಯೋತ್ಪಾದನಾ ಕೃತ್ಯವಾಗಿದೆ. ಕೇರಳದ ಭಯೋತ್ಪಾದನಾ ಚಟುವಟಿಕೆಗಳು ಇಲ್ಲಿಗೆ ವಿಸ್ತರಿಸಿದೆ ಎಂದವರು ಹೇಳಿದರು.

ಪ್ರತಿಭಟನಾ ಧರಣಿಗೆ ಮುಂಚೆ ಪಜೀರ್‌ನಿಂದ ಕೊಣಾಜೆಯ ಠಾಣೆಯವರೆಗೆ ಮೌನ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಧರಣಿಯಲ್ಲಿ ಮಾಜಿ ಶಾಸಕ ಜಯರಾಮ ಶೆಟ್ಟಿ, ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಸಂಘ ಪರಿವಾರದ ಮುಖಂಡರಾದ ಗಣಧಿರಾಜ ಕೆದಿಲ, ಬಿಜೆಪಿ ಮುಖಂಡರಾದ ಚಂದ್ರಹಾಸ್ ಉಚ್ಚಿಲ್, ಧನಲಕ್ಷ್ಮೀ ಗಟ್ಟಿ, ಸೀತಾರಾಮ ಶೆಟ್ಟಿ, ಸತೀಶ್ ಆಚಾರ್ಯ, ಸೇಸಪ್ಪ ಟೈಲರ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News