ಪಣಂಬೂರು: ಕರಾವಳಿ ಉತ್ಸವ ಸಮಾರೋಪ

Update: 2017-01-01 16:09 GMT

 ಮಂಗಳೂರು, ಜ. 1: ಪಣಂಬೂರು ಕಡಲ ತೀರದಲ್ಲಿ ರವಿವಾರ ನಡೆದ ಕರಾವಳಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಆರ್ಥಿಕ ತಜ್ಞ ಎನ್.ಕೆ. ತಿಂಗಳಾಯ ಅವರಿಗೆ ಪ್ರತಿಷ್ಠಿತ ಕರಾವಳಿ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬ್ಯಾಂಕ್‌ಗಳು ಜನರ ಪರವಾಗಿರುವ ಸಂಸ್ಥೆಗಳಾಗಿದ್ದು, ಜನರಿಗಾಗಿ ಕೆಲಸ ಮಾಡಬೇಕು. ಆದರೆ ಇಂದು ಬ್ಯಾಂಕ್‌ಗಳಲ್ಲಿ ಸರ್ವಾಧಿಕಾರದ ಧೋರಣೆ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.

ಮೂರು ದಶಕಗಳ ಕಾಲ ಬ್ಯಾಂಕ್‌ಗಳಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದೇನೆ. ಈ ಸೇವಾವಧಿಯಲ್ಲಿ ಯಾವುದೇ ಪ್ರಶಸ್ತಿ ಪಡೆದಿಲ್ಲ. ಅದನ್ನು ಬಯಸಿಯೂ ಇರಲಿಲ್ಲ. ಆದರೆ ಇಂದು ಕರಾವಳಿ ಉತ್ಸವ ಸಮಿತಿಯಿಂದ ಸನ್ಮಾನಿಸಲ್ಪಡುವುದಕ್ಕೆ ಸಂತೋಷಪಟ್ಟಿದ್ದೇನೆ ಎಂದರು. ನನ್ನ 31 ವರ್ಷಗಳ ಸೇವಾವಧಿಯಲ್ಲಿ ದೇಶದ ಉದ್ದಗಲಕ್ಕೂ ಸಂಚರಿಸಿದ್ದೇನೆ. ಜನರಲ್ಲಿನ ಬಡತನವನ್ನು ಹತ್ತಿರದಿಂದ ಕಂಡಿದ್ದೇನೆ. ಅಂದು ದೇಶದ ಜನಸಂಖ್ಯೆ ಕೇವಲ 35 ಕೋಟಿ ಇತ್ತು. ಈಗ 125 ಕೋಟಿಗಳಷ್ಟಾಗಿದೆ. ಇವರಲ್ಲಿ ಬಡವರೇ ಹೆಚ್ಚಾಗಿದ್ದಾರೆ. ಅವರಿಗೆ ಸಾಲ ನೀಡಿ ಅವರ ಜೀವನ ಮಟ್ಟ ಸುಧಾರಿಸುವುದು ಬ್ಯಾಂಕ್‌ಗಳ ಕರ್ತವ್ಯ ಆಗಬೇಕು ಎಂದು ತಿಂಗಳಾಯ ಸಲಹೆ ನೀಡಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ತಿಂಗಳಾಯ ಅವರಿಗೆ ಅರ್ಹತೆಯ ಆಧಾರದಲ್ಲಿ ಈ ಪ್ರಶಸ್ತಿ ನೀಡಲಾಗಿದೆ ಎಂದರು.

 ಇದೇ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಮೊಯ್ದಿನ್ ಬಾವ ವಹಿಸಿದ್ದರು. ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಮಹಮ್ಮದ್ ಹನೀಫ್, ಗೇರು ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್, ಜಿ.ಪಂ. ಉಪಕಾರ್ಯದರ್ಶಿ ಉಮೇಶ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News