ಕ್ರಮಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಪ್ಪಿನಂಗಡಿ ಗ್ರಾಪಂಗೆ ನಿರ್ದೇಶನ

Update: 2017-01-01 18:55 GMT

ಉಪ್ಪಿನಂಗಡಿ, ಜ.1: ಇಲ್ಲಿನ ಕೋಟೆ ಹಿತ್ಲು ಎಂಬಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯವೊಂದರ ಶೌಚಾಲಯದ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಹರಿಯ ಬಿಡುತ್ತಿರುವುದನ್ನು ಹಾಗೂ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯನ್ನು ಮಲೀನಗೊಳಿಸುತ್ತಿರುವುದನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಗಂಭೀರವಾಗಿ ಪರಿಗಣಿಸಿದ್ದು, ಸ್ಥಳೀಯ ಪಂಚಾಯತ್ ಆಡಳಿತಕ್ಕೆ ಅಗತ್ಯ ಕ್ರಮ ಜರಗಿಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಉಪ್ಪಿನಂಗಡಿ ಗ್ರಾಪಂ ವ್ಯಾಪ್ತಿಯ ಕೋಟೆ ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರು ನಾಲ್ಕು ಮಹಡಿಗಳ ವಸತಿ ಸಮುಚ್ಚಯವನ್ನು ನಿರ್ಮಿಸಿದ್ದು, ಈ ಸಮುಚ್ಚಯದ ಶೌಚಾಲಯ ಹಾಗೂ ಗೃಹ ಬಳಕೆ ನೀರನ್ನು ಕಾಂಕ್ರೀಟ್ ಗುಂಡಿಗಳಲ್ಲಿ ಸಂಗ್ರಹಿಸಿ, ಅಲ್ಲಿಂದ ಸಾರ್ವಜನಿಕ ತೆರೆದ ಚರಂಡಿಯ ಮೂಲಕ ನೇತ್ರಾವತಿ ನದಿಗೆ ಬಿಡುವುದು ಕಂಡು ಬಂದಿದ್ದು, ಇದರಿಂದಾಗಿ ಪರಿಸರದಲ್ಲಿ ದುರ್ವಾಸನೆ ಬೀರುವುದಲ್ಲದೆ, ಸಾರ್ವಜನಿಕರಿಗೆ ತೊಂದರೆಯಾಗಿರುವುದು ಕಂಡು ಬಂದಿದೆ.

ಈ ವಸತಿ ಸಮುಚ್ಚಯಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಯಾವುದೇ ಪರವಾನಿಗೆ ನೀಡಿಲ್ಲ. ತ್ಯಾಜ್ಯ ನೀರನ್ನು ಸಂಸ್ಕರಿಸದೇ ಚರಂಡಿಗೆ ಬಿಡುವುದಲ್ಲದೆ, ಬಳಿಕ ಅದನ್ನು ನೇತ್ರಾವತಿ ನದಿಗೆ ಬಿಡುವುದರಿಂದ ನದಿ ನೀರು ಮಲೀನವಾಗುತ್ತಿದೆ. ಈ ಬಗ್ಗೆ ಪಂಚಾಯತ್ ಆಡಳಿತ ಸೂಕ್ತ ಸ್ಥಳ ತನಿಖೆ ನಡೆಸಿ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡಬೇಕು. ಪಂಚಾಯತ್ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಗಳು, ಹೊಟೇಲ್‌ಗಳಿಂದ ಮಲೀನ ನೀರು ನೇತ್ರಾವತಿ ನದಿಯನ್ನು ಸೇರುತ್ತಿರುವುದು ಕಂಡು ಬಂದಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಉಪ್ಪಿನಂಗಡಿ ಗ್ರಾಪಂಗೆ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News