ಮಂಜು ಹೊದ್ದ ರಾಜಧಾನಿ: ರೈಲು, ವಿಮಾನ ಸಂಚಾರ ಅಸ್ತವ್ಯಸ್ತ
Update: 2017-01-02 09:00 IST
ಹೊಸದಿಲ್ಲಿ, ಜ.2: ರಾಜಧಾನಿ ಹೊಸದಿಲ್ಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ದಟ್ಟವಾದ ಮಂಜು ಮುಸುಕಿದ ಹಿನ್ನೆಲೆಯಲ್ಲಿ ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದೆ.
ದಿಲ್ಲಿಗೆ ಬರಬೇಕಿದ್ದ 53 ರೈಲುಗಳು ವಿಳಂಬವಾಗಿದ್ದು, 26 ರೈಲುಗಳ ವೇಳಾಪಟ್ಟಿಯನ್ನು ಬದಲು ಮಾಡಲಾಗಿದೆ. ದಟ್ಟ ಮಂಜಿನ ಕಾರಣದಿಂದ ಮೂರು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.
ಒಂಬತ್ತು ಅಂತಾರಾಷ್ಟ್ರೀಯ ವಿಮಾನಗಳು ಕೂಡಾ ವಿಳಂಬವಾಗಿದ್ದು, ಒಂದು ವಿಮಾನದ ಹಾರಾಟ ರದ್ದುಪಡಿಸಲಾಗಿದೆ. ದೇಶದೊಳಗೆ ಕಾರ್ಯನಿರ್ವಹಿಸುವ ಮೂರು ವಿಮಾನಗಳು ವಿಳಂಬವಾಗಿದ್ದು, ಎರಡು ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.
ಉತ್ತರ ಪ್ರದೇಶದ ಲಕ್ನೋದಲ್ಲೂ ಇದೇ ಪರಿಸ್ಥಿತಿ ಇದ್ದು, ಶೀತಗಾಳಿಯಿಂದ ಜನ ಕಂಗೆಟ್ಟಿದ್ದಾರೆ.