ಟರ್ಕಿ ನೈಟ್‌ಕ್ಲಬ್ ಮೇಲೆ ದಾಳಿ: 39 ಬಲಿ - ಹತ್ಯೆಗೊಳಗಾಗಿರುವ ಭಾರತೀಯರೆಷ್ಟು?
Update: 2017-01-02 09:11 IST
ಇಸ್ತಾಂಬುಲ್, ಜ.2: ಹೊಸ ವರ್ಷದ ಸಂಭ್ರಮದಲ್ಲಿ ತೇಲುತ್ತಿದ್ದ ನೈಟ್‌ಕ್ಲಬ್ ಮೇಲೆ ಶಂಕಿತ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ 39 ಮಂದಿ ಮೃತಪಟ್ಟಿದ್ದಾರೆ.
ಮೃತಪಟ್ಟ ಭಾರತೀಯರನ್ನು ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಎನ್‌ಸಿಪಿ ಮುಖಂಡ ಅಖ್ತರ್ ರಿಝ್ವಿ ಅವರ ಪುತ್ರ ಅಬಿಸ್ ರಿಝ್ವಿ ಹಾಗೂ ಗುಜರಾತ್‌ನ ಖುಷಿ ಶಾ ಎಂದು ಗುರುತಿಸಲಾಗಿದೆ. ರಿಝ್ವಿ ಹಾಗೂ ಶಾ ಕುಟುಂಬದ ಜತೆಗೆ ಈಗಾಗಲೇ ತಾವು ಮಾತನಾಡಿ ಸಾಂತ್ವನ ಹೇಳಿರುವುದಾಗಿ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ. ಜತೆಗೆ ಟರ್ಕಿಯಲ್ಲಿ ಭಾರತದ ರಾಯಭಾರಿಯಾಗುರುವ ರಾಹುಲ್ ಕುಲಶ್ರೇಷ್ಠ ಜತೆಗೂ ಮಾತುಕತೆ ನಡೆಸಿದ್ದು, ಅವರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಸಂತ್ರಸ್ತರ ಕುಟುಂಬಕ್ಕೆ ಸೂಕ್ತ ನೆರವು ನೀಡುತ್ತಿದ್ದಾರೆ ಎಂದು ಸುಷ್ಮಾ ವಿವರಿಸಿದ್ದಾರೆ. ಮುಂಬೈ ಮೂಲದ ಬಿಲ್ಡರ್, ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ಅಬಿಸ್ (49) ಹೊಸ ವರ್ಷ ಸಂಭ್ರಮಾಚರಣೆಗಾಗಿ ಟರ್ಕಿಗೆ ತೆರಳಿದ್ದರು.