ರೋಟಕ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಮೇಲೆ ಶೂ ಎಸೆತ
ರೋಟಕ್, ಜ.2: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ರೋಟಕ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಯುವಕನೊಬ್ಬ ಶೂ ಎಸೆದಿದ್ದಾನೆ. ಶೂ ಎಸೆದ ವ್ಯಕ್ತಿಯನ್ನು ಮೋದಿ ಭಕ್ತ ಎಂದು ಕರೆದಿರುವ ಅರವಿಂದ್ ಕೇಜ್ರಿವಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಪ್ರಕರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ದೂರಿದ್ದಾರೆ. ಶೂ ಎಸೆದ ವ್ಯಕ್ತಿ ದಾದ್ರಿ ಜಿಲ್ಲೆಯ ನಿವಾಸಿ 26 ವರ್ಷದ ವಿಕಾಸ್ ಕುಮಾರ್ ಎಂದು ಗುರುತಿಸಲಾಗಿದೆ.
ನೋಟು ಅಮಾನ್ಯ ವಿರುದ್ಧ ಆಯೋಜಿಸಲಾಗಿದ್ದ ತಿಜೋರಿ ತೋಡ್, ಭಾಂಡಾ ಫೋಡ್ ಎನ್ನುವ ರ‍್ಯಾಲಿಯಲ್ಲಿ ಕೇಜ್ರಿವಾಲ್ ಮಾತನಾಡುತ್ತಿದ್ದರು. ಮಾಧ್ಯಮ ವಿಭಾಗದಲ್ಲಿ ಕುಳಿತ್ತಿದ್ದ ವಿಕಾಸ್ ಕುಮಾರ್ ಶೂವನ್ನು ವೇದಿಕೆಯತ್ತ ಎಸೆದರು. ಆದರೆ ಶೂ ವೇದಿಕೆಯವರೆಗೂ ತಲುಪಿರಲಿಲ್ಲ. ಪೊಲೀಸರು ಬಂಧಿಸುವ ಮೊದಲೇ ಆಮ್ ಆದ್ಮಿ ಪಾರ್ಟಿಯ ಸದಸ್ಯರು ವಿಕಾಸ್‌ನನ್ನು ಹಿಡಿದು ಥಳಿಸಿದರು.
ನಂತರ ಪೊಲೀಸರು ವಿಕಾಸ್ ಕುಮಾರ್‌ನನ್ನು ರೋಟಕ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. ಸಟ್ಲೇಜ್- ಯಮುನಾ ಲಿಂಕ್ ಕಾಲುವೆ ವಿಷಯದಲ್ಲಿ ಕೇಜ್ರಿವಾಲ್ ಮೇಲೆ ಆಕ್ರೋಶ ಇದ್ದುದಕ್ಕಾಗಿ ಶೂ ಎಸೆದಿರುವುದಾಗಿ ವಿಕಾಸ್ ಹೇಳಿದ್ದಾನೆ. ತಮ್ಮ ಕೃತ್ಯಕ್ಕೆ ಅವನು ಕ್ಷಮಾಪಣೆಯನ್ನೂ ಕೇಳಿದ್ದಾನೆ.
ಆಪ್ ಈ ಪ್ರಕರಣದ ಬಗ್ಗೆ ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಿಲ್ಲ. ನಾನು ಹೇಳಿದ್ದೆ ಮೋದಿ ಪುಕ್ಕಲ ಎಂದು. ಇಂದು ಅವರು ತಮ್ಮ ಚಮಚಾಗಳಿಂದ ನನ್ನ ಮೇಲೆ ಶೂ ಎಸೆಯುವಂತೆ ಮಾಡಿದ್ದಾರೆ. ಮೋದಿಯವರೇ ನಾವೂ ಇದನ್ನು ಮಾಡಬಲ್ಲೆವು. ಆದರೆ ನಮ್ಮ ಮೌಲ್ಯಗಳು ಇದನ್ನು ಮಾಡಲು ಬಿಡುವುದಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿದ್ದಾರೆ.