ಮುಖ್ಯಮಂತ್ರಿ ಸ್ಥಾನವಹಿಸಿಕೊಳ್ಳಲು ಶಶಿಕಲಾಗೆ ತಂಬಿದೊರೈ ಒತ್ತಾಯ
ಚೆನ್ನೈ, ಜ.2: ವಿ.ಕೆ. ಶಶಿಕಲಾ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಎರಡು ದಿನಗಳ ಬಳಿಕ ಪಕ್ಷದ ಹಿರಿಯ ಸಂಸದ ತಂಬಿದೊರೈ ಅವರು ಮುಖ್ಯಮಂತ್ರಿ ಸ್ಥಾನ ವಹಿಸಿಕೊಳ್ಳುವಂತೆ ಶಶಿಕಲಾರನ್ನು ಒತ್ತಾಯಿಸಿದ್ದಾರೆ.
ದೇಶ ಇನ್ನೆರಡು ವರ್ಷಗಳಲ್ಲಿ ಸಂಸತ್ ಚುನಾವಣೆ ಎದುರಿಸಲಿದೆ. ಜನರಿಂದ ಭಾರೀ ಬೆಂಬಲ ಪಡೆಯಬೇಕಾದರೆ ನಮ್ಮ ಪಕ್ಷ ಎಐಎಡಿಎಂಕೆ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಚುನಾವಣೆಯಲ್ಲಿ ನಿರಂತರವಾಗಿ ಗೆಲುವು ಸಾಧಿಸಬೇಕು. ತಕ್ಷಣವೇ ತಮಿಳುನಾಡು ಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಳ್ಳುವ ಮೂಲಕ ಸರಕಾರದ ನಾಯಕತ್ವವನ್ನು ವಹಿಸಿಕೊಳ್ಳಬೇಕು ಎಂದು ಚಿನ್ನಮ್ಮ(ಶಶಿಕಲಾ) ಅವರ ಬಳಿ ವಿನಂತಿಸಿಕೊಳ್ಳುವೆ ಎಂದು ಲೋಕಸಭೆಯ ಉಪ ಸಭಾಪತಿ ಹಾಗೂ ಎಐಎಡಿಎಂಕೆ ಕಾರ್ಯದರ್ಶಿ ಎಂ.ತಂಬಿದೊರೈ ಪತ್ರದ ಮುಖೇನ ವಿನಂತಿಸಿದ್ದಾರೆ.
ಪುರಚ್ಚಿ ತಲೈವಿ ಗೌರವಾನ್ವಿತ ಅಮ್ಮಾನಂತೆಯೇ ಚಿನ್ನಮ್ಮ ಕೂಡ ಚಾಣಾಕ್ಷೆ ಹಾಗೂ ಪಕ್ಷದ ಕಾರ್ಯಕರ್ತರ ಅಭಿಮಾನಕ್ಕೂ ಪಾತ್ರರಾಗಿದ್ದಾರೆ. ಪಕ್ಷದ ಘಟಕಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ತಮಿಳುನಾಡು ಜನತೆಯ ಕಲ್ಯಾಣಕ್ಕಾಗಿ ಚಿನ್ನಮ್ಮ ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನವನ್ನು ಪಡೆದು ಮಹತ್ತರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ತಂಬಿದೊರೈ ವಿನಂತಿಸಿದ್ದಾರೆ.
ಪಕ್ಷದ ಹಿರಿಯ ಮುಖಂಡ ತಂಬಿದೊರೈ ಮಾತ್ರವಲ್ಲ ಕಂದಾಯ ಸಚಿವ ಉದಯ್‌ಕುಮಾರ್ ಕೂಡ ಕೆಲವೇ ದಿನಗಳ ಹಿಂದೆ ಮುಖ್ಯಮಂತ್ರಿ ಆಗುವಂತೆ ಶಶಿಕಲಾರನ್ನು ಒತ್ತಾಯಿಸಿದ್ದರು.
ಡಿ.5ರಂದು ಜಯಲಲಿತಾ ನಿಧನರಾದ ತಕ್ಷಣ ಮೂರನೆ ಬಾರಿ ಒ. ಪನ್ನೀರ್ ಸೆಲ್ವಂ ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನವಹಿಸಿಕೊಂಡಿದ್ದರು. 2001 ಹಾಗೂ 2014ರಲ್ಲಿ ಸೆಲ್ವಂ ತಮಿಳುನಾಡಿನ ಹಂಗಾಮಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.