ಕ್ಯಾಶ್ ಲೆಸ್ ಆಗಲು ಹೊರಟ ದೇಶದಲ್ಲಿ ಹೀಗೂ ಒಂದು ಊರು !

Update: 2017-01-02 09:59 GMT

ಒಂದು ಕಡೆ ನೋಟು ಅಮಾನ್ಯದ ಬಳಿಕ ಇಡೀ ದೇಶ ಸರತಿಯಲ್ಲಿ ನಿಂತಿದೆ ಎಂದು ಹೇಳಲಾಗುತ್ತಿದೆ. ಆದರೆ ದೇಶದಲ್ಲಿ ಎಂದೂ ಸಾವಿರ ರೂಪಾಯಿ ನೋಟನ್ನೇ ನೋಡದವರು ಮತ್ತು ಅದಕ್ಕಾಗಿ ಸರತಿ ನಿಲ್ಲದ ಇಂತಹ ಕೆಲವರೂ ಇದ್ದಾರೆ! ಇವರಿಗೆ ನೋಟು ಅಮಾನ್ಯದಂಥ ಒಂದು ನಿರ್ಧಾರ ಕೈಗೊಳ್ಳಲಾಗಿದೆ ಎನ್ನುವ ವಿಷಯವೂ ಗೊತ್ತಿಲ್ಲ. ಇದು ಮಹಾರಾಷ್ಟ್ರದ ಒಂದು ಗ್ರಾಮದ ಕತೆ.

ರೋಶಮಲ್ ಎನ್ನುವ ಈ ಗ್ರಾಮ ಪುಣೆಯಿಂದ 500 ಕಿಮೀ ದೂರದಲ್ಲಿದೆ.  ಇಲ್ಲಿ ನೆಲೆಸಿರುವ ಆದಿವಾಸಿಗಳಿಗೆ ರೂ. 500 ಮತ್ತು 1000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿರುವುದೇ ತಿಳಿದಿಲ್ಲ. ರೋಶಮಲ್ ಗ್ರಾಮದಲ್ಲಿ ನೆಲೆಸಿರುವ ಜನರ ಪ್ರಕಾರ ದೇಶದಲ್ಲಿ ಈಗ ಇಂದಿರಾ ಗಾಂಧಿ ಮಗಳು ಸೋನಿಯಾ ಸರ್ಕಾರವಿದೆ! (ಸೋನಿಯಾ ಗಾಂಧಿ ಇಂದಿರಾರ ಸೊಸೆ ಎನ್ನುವುದೂ ಅವರಿಗೆ ತಿಳಿದಿಲ್ಲ.)

ಈ ಗ್ರಾಮದ ಜನರ ಬಳಿ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಇರುವ ಪ್ರಶ್ನೆಯೇ ಬರುವುದಿಲ್ಲ. ಗ್ರಾಮದಲ್ಲಿ ರಸ್ತೆ, ವಿದ್ಯುತ್, ವಸತಿ ಅಥವಾ ನೀರಿನಂತಹ ಮೂಲ ಸೌಕರ್ಯಗಳೂ ಇಲ್ಲ. ಗ್ರಾಮಸ್ಥರಿಗೆ ನೋಟು ಅಮಾನ್ಯದ ಸುದ್ದಿಯೂ ಗೊತ್ತಿಲ್ಲ.

ಇವರ ಬಳಿ ದೊಡ್ಡ ಮೌಲ್ಯದ ನೋಟೇ ಬರದ ಕಾರಣ ಸಮಸ್ಯೆಯೂ ಆಗಿಲ್ಲ. ಆದರೆ ಇವರು ಜೋಳ ಮತ್ತು ಮೆಕ್ಕೆಜೋಳವನ್ನು ಮಂಡಿಗೆ ಹಾಕಲು ಹೋಗುವುದಿಲ್ಲ. ಏಕೆಂದರೆ ಕಿಲೋಗೆ ರೂ. 13- 15ರಂತೆ ಮಾರಾಟವಾಗುತ್ತಿದ್ದ ಬೆಳೆಗಳು ಈಗ ರೂ. 10ಕ್ಕೆ ಮಾರಾಟವಾಗುತ್ತಿರುವ ಕಾರಣ ಎಲ್ಲವನ್ನೂ ದಾಸ್ತಾನಿಟ್ಟು ಕಾಯುತ್ತಿದ್ದಾರೆ.

ಸುದ್ದಿಗಳ ಪ್ರಕಾರ ಗ್ರಾಮದಲ್ಲಿ ರಸ್ತೆಗಳು ಅಥವಾ ಬಸ್ಸೂ ಇಲ್ಲ. ಮಂಡಿಗೆ ಇವರು ನಡೆದೇ ಹೋಗುತ್ತಾರೆ. ಅಥವಾ ಅತೀ ವಿರಳವಾಗಿ ಓಡಾಡುವ ಜೀಪ್ ಹಿಡಿಯಬೇಕು. ಸಮೀಪದಲ್ಲಿ ಪೆಟ್ರೋಲ್ ಪಂಪ್ ಕೂಡ ಇಲ್ಲ. ಆದರೆ ಅಲ್ಲಲ್ಲಿ ಬಾಟಲಿಗಳಲ್ಲಿ ಸೀಮೆ ಎಣ್ಣೆ ಮಾರುವವರು ಕಾಣ ಸಿಗುತ್ತಾರೆ.

ನೋಟು ಅಮಾನ್ಯವಾದ ನಂತರ ಬ್ಯಾಂಕಿನಿಂದ 2000 ರುಪಾಯಿಗಳನ್ನು ಮಾತ್ರ ತೆಗೆಯಬಹುದು ಎಂದು ಹೇಳಿದಾಗ, ಅದು ಜೀವನೋಪಾಯಕ್ಕೆ ಸಾಕಾಗುತ್ತದೆ ಎನ್ನುವ ಉತ್ತರ ಬರುತ್ತದೆ. “ನಿಮಗೆ ಇದಕ್ಕಿಂತ ಹೆಚ್ಚು ಹಣದ ಆವಶ್ಯಕತೆ ಏಕಿದೆ? ನಾವು ತಿಂಗಳಿಗೆ 1500 ರೂಪಾಯಿಯಲ್ಲಿ ಕಾಲ ಕಳೆಯುತ್ತೇವೆ” ಎಂದು ಉತ್ತರಿಸುತ್ತಾರೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News