ರಶ್ಯಕ್ಕೆ ನೀಡಿದ ಶಿಕ್ಷೆ ಕಠಿಣವಾಯಿತು: ಟ್ರಂಪ್ ಅಧಿಕಾರಿ
ವಾಶಿಂಗ್ಟನ್, ಜ. 2: ರಶ್ಯದ 35 ಶಂಕಿತ ಬೇಹುಗಾರರನ್ನು ಉಚ್ಚಾಟಿಸುವ ಮೂಲಕ ಅಮೆರಿಕವು ರಶ್ಯವನ್ನು ಅತಿಯಾಗಿ ದಂಡಿಸಿದೆ ಎಂಬುದಾಗಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಉನ್ನತ ಸಹಾಯಕರೊಬ್ಬರು ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ವೇಳೆ ರಾಜಕೀಯ ಗುಂಪುಗಳ ಮೇಲೆ ಸೈಬರ್ ದಾಳಿ ನಡೆಸಿದ ಅಪರಾಧದಲ್ಲಿ ಶಾಮೀಲಾಗಿದ್ದರು ಎಂಬುದಾಗಿ ಆರೋಪಿಸಿ ಒಬಾಮ ಆಡಳಿತ ಕಳೆದ ವಾರ ರಶ್ಯದ ಎರಡು ಬೇಹುಕಾರಿಕಾ ಸಂಸ್ಥೆಗಳ ಕಚೇರಿಗಳನ್ನು ಮುಚ್ಚಿತ್ತು ಹಾಗೂ 35 ರಾಜತಾಂತ್ರಿಕ ಅಧಿಕಾರಿಗಳಿಗೆ ದೇಶ ಬಿಟ್ಟು ಹೋಗುವಂತೆ ಸೂಚಿಸಿತ್ತು.
ಈ ವಿಷಯಕ್ಕೆ ಸಂಬಂಧಿಸಿ, ಅಮೆರಿಕದ ಗುಪ್ತಚರ ಸಂಸ್ಥೆಗಳ ಬಗ್ಗೆ ಟ್ರಂಪ್ ಪ್ರಶ್ನೆ ಕೇಳಲಿದ್ದಾರೆ ಎಂದು ಶ್ವೇತಭವನದ ಮುಂದಿನ ಪತ್ರಿಕಾ ಕಾರ್ಯದರ್ಶಿ ಸಿಯನ್ ಸ್ಪೈಸರ್ ಎಬಿಸಿ ಚಾನೆಲ್‌ನ ‘ದಿಸ್ ವೀಕ್’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಪದಾಧಿಕಾರಿಗಳ ಕಂಪ್ಯೂಟರ್‌ಗಳಿಗೆ ಕನ್ನ ಹಾಕಲಾದ ಪ್ರಕರಣದಲ್ಲಿ ರಶ್ಯ ಶಾಮೀಲಾಗಿದೆ ಎನ್ನುವ ಬಗ್ಗೆ ಸಂದೇಹವಿದೆ ಎಂಬುದಾಗಿ ಟ್ರಂಪ್ ಶನಿವಾರ ಪುನರುಚ್ಚರಿಸಿದ್ದಾರೆ.