×
Ad

ಕಾಕ್‌ಪಿಟ್‌ನಲ್ಲಿ ಕುಡಿದು ಬಿದ್ದಿದ್ದ ಪೈಲಟ್ ಬಂಧನ

Update: 2017-01-02 20:41 IST

ಮಾಂಟ್ರಿಯಲ್ (ಕೆನಡ), ಜ. 2: ಪಶ್ಚಿಮ ಕೆನಡದ ಕ್ಯಾಲ್ಗರಿ ವಿಮಾನ ನಿಲ್ದಾಣದಲ್ಲಿ ಹಾರಾಟಕ್ಕೆ ಸಿದ್ಧವಾಗಿದ್ದ ವಿಮಾನವೊಂದರಲ್ಲಿ ಕುಡಿದು ಬಿದ್ದಿದ್ದ ಪೈಲಟ್‌ನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಸನ್‌ವಿಂಗ್ ವಿಮಾನದ ಕಾಕ್‌ಪಿಟ್‌ನಲ್ಲಿ 37 ವರ್ಷದ ಪೈಲಟ್ ಬೆಳಗ್ಗೆ ಸುಮಾರು 7 ಗಂಟೆಯ ಹೊತ್ತಿಗೆ ಕುಡಿದು ಬಿದ್ದಿರುವುದು ಪತ್ತೆಯಾಯಿತು. ಆತನು ವಿಮಾನವನ್ನು ಮೆಕ್ಸಿಕೊದ ಕ್ಯಾನ್‌ಕನ್‌ಗೆ ಹಾರಿಸಬೇಕಾಗಿತ್ತು.

ವಿಮಾನ ಹಾರಾಟ ನಡೆಸುವ ಮೊದಲು ಪೈಲಟ್‌ನ ವಿಚಿತ್ರ ವರ್ತನೆಯನ್ನು ವಿಮಾನದ ಸಿಬ್ಬಂದಿ ಮತ್ತು ವಿಮಾನಯಾನ ಕಂಪೆನಿಯ ಇತರ ಸಿಬ್ಬಂದಿ ಗಮನಿಸಿದರು. ನೋಡನೋಡುತ್ತಿದ್ದಂತೆಯೇ ಪೈಲಟ್ ವಿಮಾನದ ಕಾಕ್‌ಪಿಟ್‌ನಲ್ಲಿ ಮೂರ್ಛೆ ಹೋದನು. ಇತರ ಸಿಬ್ಬಂದಿ ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಪೈಲಟ್‌ನನ್ನು ಬಳಿಕ ವಿಮಾನದಿಂದ ಹೊರಗೆ ಕರೆದೊಯ್ದು ಜೈಲಿನಲ್ಲಿ ಇರಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ಬಂಧನದ ಎರಡು ಗಂಟೆಗಳ ಬಳಿಕವೂ ಆತನ ದೇಹದಲ್ಲಿ ಅನುಮೋದಿತ ಪ್ರಮಾಣದ ಮೂರು ಪಟ್ಟಿಗೂ ಅಧಿಕ ಆಲ್ಕೊಹಾಲ್ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ಸ್ವಯಂನಿಯಂತ್ರಣ ಹೊಂದಿರದಿದ್ದ ಸಮಯದಲ್ಲಿ ವಿಮಾನದ ನಿಯಂತ್ರಣವನ್ನು ಹೊಂದಿದ ಆರೋಪ ಹಾಗೂ ಇತರ ಆರೋಪಗಳನ್ನು ಆತನ ವಿರುದ್ಧ ಹೊರಿಸಲಾಗಿದೆ.
ಬಳಿಕ 99 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹೊತ್ತ ಬೋಯಿಂಗ್ 737 ವಿಮಾನವನ್ನು ಬೇರೊಬ್ಬ ಪೈಲಟ್ ಹಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News