ಕ್ರೀಡಾ ನೀತಿ ಸಂಹಿತೆ ಅನುಷ್ಠಾನಕ್ಕೆ ಸಮಿತಿ ರಚನೆ
ಹೊಸದಿಲ್ಲಿ, ಜ.2: ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಭ್ರಷ್ಟಾಚಾರ ಹಗರಣದಲ್ಲಿ ಜೈಲು ಸೇರಿದ್ದ ಕಳಂಕಿತರಾದ ಸುರೇಶ್ ಕಲ್ಮಾಡಿ ಹಾಗೂ ಅಭಯ್ ಚೌಟಾಲರನ್ನು ಆಜೀವ ಅಧ್ಯಕ್ಷರಾಗಿ ಆಯ್ಕೆ ಮಾಡಿ ವಿವಾದಕ್ಕೆ ಸಿಲುಕಿದ ಬಳಿಕ ಎಚ್ಚೆತ್ತುಕೊಂಡಿರುವ ಕ್ರೀಡಾ ಸಚಿವಾಲಯ ಭವಿಷ್ಯದಲ್ಲಿ ಯಾವ ಕ್ರೀಡಾ ಸಂಸ್ಥೆಗಳು ಇಂತಹ ಹೆಜ್ಜೆ ಇಡಬಾರದೆಂಬ ಉದ್ದೇಶದಿಂದ ರಾಷ್ಟ್ರೀಯ ಕ್ರೀಡಾ ನೀತಿ ಸಂಹಿತೆ ಜಾರಿಗೆ ತರಲು ಸಮಿತಿ ರಚಿಸಲು ಮುಂದಾಗಿದೆ.
ಐಒಎ ವಿವಾದಿತ ಹೆಜ್ಜೆ ಇಟ್ಟ ಬಳಿಕ ರಾಜ್ಯ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಹಾಗೂ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಕ್ರೀಡಾ ಕಾರ್ಯದರ್ಶಿಯ ನೇತೃತ್ವದಲ್ಲಿ ಸಮಿತಿಯೊಂದರನ್ನು ರಚಿಸಲು ನಿರ್ಧರಿಸಿದ್ದಾರೆ. ಈ ಸಮಿತಿಯು ರಾಷ್ಟ್ರೀಯ ಕ್ರೀಡಾಭಿವೃದ್ದಿ ನೀತಿ ಸಂಹಿತೆ ಹಾಗೂ ಕ್ರೀಡಾ ಫೆಡರೇಶನ್‌ಗಳ ಕಾರ್ಯಚಟುವಟಿಕೆಯ ಜಾರಿಗೆ ಸಲಹೆ ನೀಡಲಿದೆ. ಸಮಿತಿಯು ತಿಂಗಳೊಳಗೆ ವರದಿ ಸಲ್ಲಿಸಬೇಕು ಎಂದು ಕ್ರೀಡಾ ಸಚಿವಾಲಯ ಹೇಳಿದೆ.
ಕಳಂಕಿತರಾದ ಕಲ್ಮಾಡಿ ಹಾಗೂ ಚೌಟಾಲರನ್ನು ಆಜೀವ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸುವ ತನಕ ಐಒಎನ್ನು ಅಮಾನತಿನಲ್ಲಿಡಲು ಕ್ರೀಡಾ ಸಚಿವಾಲಯ ಇತ್ತೀಚೆಗೆ ನಿರ್ಧರಿಸಿತ್ತು.