×
Ad

ಸಣ್ಣ ಉಳಿತಾಯ ಬಡ್ಡಿದರ ಬದಲಾವಣೆ ಇಲ್ಲ

Update: 2017-01-02 23:37 IST

ಹೊಸದಿಲ್ಲಿ, ಜ. 2: ಪಿಪಿಎಫ್ ಹಾಗೂ ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿದರವನ್ನು ಜನವರಿಯಿಂದ ಮಾರ್ಚ್ ತಿಂಗಳ ತ್ರೈಮಾಸಿಕದಲ್ಲಿ ಬದಲಿಸದಿರಲು ಕೇಂದ್ರ ಸರಕಾರ ನಿರ್ಧರಿಸಿದೆ. ಬ್ಯಾಂಕ್‌ಗಳು ಠೇವಣಿ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದರೂ, ಸಣ್ಣ ಉಳಿತಾಯದ ಮೇಲಿನ ಬಡ್ಡಿದರ ಬದಲಿಸದಿರಲು ಸರಕಾರ ನಿರ್ಧರಿಸಿದೆ.

ಕಳೆದ ವರ್ಷದ ಏಪ್ರಿಲ್‌ನಿಂದೀಚೆಗೆ ಸಣ್ಣ ಉಳಿತಾಯದ ಮೇಲಿನ ಬಡ್ಡಿದರವನ್ನು ಪ್ರತಿ ತ್ರೈಮಾಸಿಕ ಅವಧಿಗೆ ಪರಿಷ್ಕರಿಸಲಾಗುತ್ತದೆ. ಆದರೆ ಜನವರಿ-ಮಾರ್ಚ್ ತ್ರೈಮಾಸಿಕದಲ್ಲೂ, ಸೆಪ್ಟಂಬರ್-ಡಿಸೆಂಬರ್ ತ್ರೈಮಾಸಿಕದ ಬಡ್ಡಿದರವನ್ನೇ ಮುಂದುವರಿಸಲಾಗುತ್ತಿದೆ.
ಪಿಪಿಎಫ್ ಯೋಜನೆಯ ಠೇವಣಿಗೆ ವಾರ್ಷಿಕ ಶೇ.8ರಷ್ಟು ಬಡ್ಡಿ ಮುಂದುವರಿಯಲಿದೆ ಎಂದು ಹಣಕಾಸು ಸಚಿವಾಲಯದ ಅಧಿಸೂಚನೆ ಹೇಳಿದೆ. ಇದು ಐದು ವರ್ಷ ಅವಧಿಯ ರಾಷ್ಟ್ರೀಯ ಉಳಿತಾಯ ಪತ್ರಕ್ಕೂ ಅನ್ವಯಿಸುತ್ತದೆ. ಕಿಸಾನ್ ವಿಕಾಸಪತ್ರದ ಪ್ರತಿಫಲ 7.7ರಲ್ಲೇ ಮುಂದುವರಿಯಲಿದ್ದು, 112 ತಿಂಗಳಿಗೆ ಇದರ ಅವಧಿ ಪರಿಪಕ್ವಗೊಳ್ಳಲಿದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಉಳಿತಾಯದ ಮೇಲಿನ ಬಡ್ಡಿದರ ಮಾತ್ರ 8.5ರಲ್ಲಿ ಮುಂದುವರಿಯಲಿದೆ. ಐದು ವರ್ಷ ಅವಧಿಯ ಹಿರಿಯ ನಾಗರಿಕ ಉಳಿತಾಯ ಯೋಜನೆಗೂ ಇದು ಅನ್ವಯಿಸುತ್ತದೆ. ಹಿರಿಯ ನಾಗರಿಕ ಯೋಜನೆಯಡಿ ಬಡ್ಡಿಯನ್ನು ಮೂರು ತಿಂಗಳಿಗೊಮ್ಮೆ ಪಾವತಿಸಲಾಗುತ್ತದೆ.
ಉಳಿತಾಯ ಖಾತೆಗೆ ಶೇ.4ರಷ್ಟು, 1-5 ವರ್ಷ ಅವಧಿಯ ನಿಶ್ಚಿತ ಠೇವಣಿಗಳಿಗೆ 7 ರಿಂದ 7.8 ಬಡ್ಡಿದರ ನೀಡಲಾಗುವುದು. ಐದು ವರ್ಷದ ಅವಧಿಯ ಸಂಚಯಿತ ಠೇವಣಿಯ ಬಡ್ಡಿ 7.3 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News