×
Ad

ಬಿಎಸ್ಸೆನ್ನೆಲ್ ಬಂಪರ್ ಕೊಡುಗೆ

Update: 2017-01-02 23:41 IST

ಹೊಸದಿಲ್ಲಿ,ಜ.2: ಉಚಿತ ಕರೆಯ ಸೌಲಭ್ಯಗಳ ಕೊಡುಗೆಯನ್ನು ನೀಡುತ್ತಿರುವ ದೇಶದ ಹಲವು ಟೆಲಿಕಾಂ ಸಂಸ್ಥೆಗಳ ದಾರಿಯಲ್ಲಿಯೇ ಸಾಗಿರುವ ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಸೆನ್ನೆಲ್, ತನ್ನ ಗ್ರಾಹಕರಿಗೆ 144 ರೂ.ಗಳ ಉಚಿತ ಕರೆ ಸೌಲಭ್ಯವನ್ನು ನೀಡುವುದಾಗಿ ಸೋಮವಾರ ಘೋಷಿಸಿದೆ.

 ಆರು ತಿಂಗಳ ಅವಧಿಗೆ ಸೀಮಿತವಾಗಿರುವ ಈ ಯೋಜನೆಯಡಿ ಗ್ರಾಹಕರು ಯಾವುದೇ ನೆಟ್‌ವರ್ಕ್‌ಗೆ ಬೇಕಾದರೂ ಒಂದು ತಿಂಗಳವರೆಗೆ ಅನಿಯಮಿತವಾಗಿ ದೂರವಾಣಿ ಕರೆ ಮಾಡಬಹುದಾಗಿದೆ. ಜೊತೆಗೆ ಅವರಿಗೆ 300 ಎಂಬಿಗಳ ಉಚಿತ ಡೇಟಾ ಸೌಲಭ್ಯ ಕೂಡಾ ದೊರೆಯಲಿದೆಯೆಂದು ಬಿಎಸ್ಸೆನ್ನೆಲ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅನುಪಮ್ ಶ್ರೀವಾಸ್ತವ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಕರೆಗಳು ಸಂಪೂರ್ಣ ಉಚಿತವಾಗಿದ್ದು, ಪ್ರೀಪೇಯ್ಡ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರಿಬ್ಬರಿಗೂ ಲಭ್ಯವಾಗಲಿದೆಯೆಂದು ಶ್ರೀವಾಸ್ತವ ಹೇಳಿದ್ದಾರೆ. ಈಗಾಗಲೇ ದೇಶಾದ್ಯಂತ 4,400 ವೈಫೈ ತಾಣಗಳನ್ನು ಬಿಎಸ್ಸೆನ್ನೆಲ್ ಸ್ಥಾಪಿಸಲಾಗಿದ್ದು, ಮುಂದಿನ ಒಂದು ವರ್ಷದಲ್ಲಿ ದೇಶಾದ್ಯಂತ 40 ಸಾವಿರ ವೈಫೈ ತಾಣಗಳನ್ನು ಸೃಷ್ಟಿಸಲಾಗುವುದೆಂದರು.
ಇದರ ಜೊತೆಗೆ, ಸಂಸ್ಥೆಯು ಗ್ರಾಮಾಂತರ ಪ್ರದೇಶಗಳಲ್ಲಿಯೂ ಸೇವೆಯನ್ನು ವಿಸ್ತರಿಸಲು ಭಾರತ ಸರಕಾರದಿಂದ 2500 ಮೆಗಾಹರ್ಟ್ಸ್ ತರಂಗಾಂತರಗಳನ್ನು ಪಡೆದುಕೊಂಡಿದೆಯೆಂದು ಶ್ರೀವಾಸ್ತವ ತಿಳಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News