×
Ad

ಹಜ್ ಅರ್ಜಿ ಪ್ರಕ್ರಿಯೆ ಡಿಜಿಟಲ್: ಮೊಬೈಲ್ ಆ್ಯಪ್‌ಗೆ ಚಾಲನೆ

Update: 2017-01-02 23:42 IST

ಹೊಸದಿಲ್ಲಿ, ಜ.2: ಹಜ್ ಅರ್ಜಿ ಪರಿಷ್ಕರಣೆ ಪ್ರಕ್ರಿಯೆಗೆ ಮೊಟ್ಟಮೊದಲ ಬಾರಿಗೆ ಡಿಜಿಟಲ್ ಸ್ಪರ್ಶ ನೀಡಲು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮುಂದಾಗಿದೆ. ಈ ಸಂಬಂಧ ಮೊಬೈಲ್ ಅಪ್ಲಿಕೇಶನ್ ಅನ್ನು ಸಚಿವ ಮುಖ್ತರ್ ಅಬ್ಬಾಸ್ ನಕ್ವಿ ಬಿಡುಗಡೆ ಮಾಡಿದರು. ಇದು ಯಾತ್ರಾರ್ಥಿಗಳುಗೆ ಎಲ್ಲ ಅಗತ್ಯ ಮಾಹಿತಿ ಹಾಗೂ ಇ-ಪಾವತಿ ಸೌಲಭ್ಯಗಳ ವಿವರಗಳನ್ನು ನೀಡಲಿದೆ. ದಕ್ಷಿಣ ಮುಂಬೈ ಹಜ್ ಹೌಸ್‌ನಲ್ಲಿ ನಡೆದ ಚಾಲನಾ ಸಮಾರಂಭದಲ್ಲಿ ಮಾತನಾಡಿದ ನಕ್ವಿ, ಹಜ್ ಅರ್ಜಿಗಳ ಪರಿಷ್ಕರಣೆ ಡಿಜಿಟಲ್ ಆಗಿ ನಡೆಯುವುದು ಇದೇ ಮೊದಲು ಎಂದು ಪ್ರಕಟಿಸಿದರು.

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಲ್ಲಿ ಇದು ಮಹತ್ವದ ಯೋಜನೆ ಎಂದು ಅವರು ಬಣ್ಣಿಸಿದರು.
ಈ ಮೊಬೈಲ್ ಆ್ಯಪ್, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇಂದಿನಿಂದಲೇ ಲಭ್ಯ. ಮುಂದಿನ ಹಜ್ ಯಾತ್ರೆಯ ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಅರ್ಜಿಗಳನ್ನು ಇಂದಿನಿಂದ ಸ್ವೀಕರಿಸಲಾಗುತ್ತಿದೆ. ಅರ್ಜಿಗಳನ್ನು ಸಲ್ಲಿಸಲು ಜನವರಿ 24 ಕೊನೆಯ ದಿನ.
ಹಜ್‌ಯಾತ್ರೆಗೆ ಅರ್ಜಿ ಸಲ್ಲಿಸುವುದು, ಎಲ್ಲ ವಿಚಾರಣೆ ಹಾಗೂ ಮಾಹಿತಿಗಳು, ಸುದ್ದಿ ಹಾಗೂ ಹೊಸ ವಿವರಗಳು, ಇ-ಪಾವತಿ, ಹೊಸ ಆ್ಯಪ್‌ನ ಮುಖ್ಯ ಲಕ್ಷಣ. ಈ ಆ್ಯಪ್ ಮೂಲಕವೇ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಐದು ಮಂದಿ ವಯಸ್ಕರು ಹಾಗೂ ಇಬ್ಬರು ಮಕ್ಕಳು ಒಂದು ಗುಂಪಿನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರ ಇ-ಮೇಲ್ ವಿಳಾಸಕ್ಕೆ ಪಿಡಿಎಫ್ ಅರ್ಜಿ ನಮೂನೆ ರವಾನೆಯಾಗಲಿದೆ.
ಅರ್ಜಿಯನ್ನು ಭರ್ತಿ ಮಾಡಿ, ಫೋಟೊ ಲಗತ್ತಿಸಿ, ಅಗತ್ಯ ದಾಖಲೆಗಳೊಂದಿಗೆ ರಾಜ್ಯ ಹಜ್ ಸಮಿತಿಗೆ ಸಲ್ಲಿಸಬೇಕಾಗುತ್ತದೆ. ನೋಂದಣಿ ಶುಲ್ಕವನ್ನು ಕೂಡಾ ಈ ಆ್ಯಪ್ ಮೂಲಕ ಪಾವತಿಸಬಹುದಾಗಿದೆ.
ಕಳೆದ ತಿಂಗಳು ಹಜ್‌ಯಾತ್ರೆಗೆ ಸಂಬಂಧಿಸಿದ ವೆಬ್‌ಸೈಟ್‌ಗೂ ದಿಲ್ಲಿಯಲ್ಲಿ ಚಾಲನೆ ನೀಡಲಾಗಿದೆ. ಇದು ಹಿಂದಿ, ಉರ್ದು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದ್ದು, ಎಲ್ಲ ಅಗತ್ಯ ಮಾಹಿತಿ ಪಡೆಯಬಹುದಾಗಿದೆ ಎಂದು ನಕ್ವಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News