ಭಾರತಕ್ಕೆ ಮಿಥಾಲಿ ರಾಜ್ ಸಾರಥ್ಯ
ಹೊಸದಿಲ್ಲಿ, ಜ.3: ಕೊಲಂಬೊದಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ವಿಶ್ವಕಪ್ ಅರ್ಹತಾ ಸುತ್ತಿನ ಟೂರ್ನಿಗೆ 14 ಸದಸ್ಯೆಯರನ್ನು ಒಳಗೊಂಡ ಭಾರತ ತಂಡವನ್ನು ಮಿಥಾಲಿ ರಾಜ್ ಮುನ್ನಡೆಸಲಿದ್ದಾರೆ.
ಐಸಿಸಿ ವಿಶ್ವಕಪ್ ಅರ್ಹತಾ ಟೂರ್ನಿಯು ಫೆ.3 ರಿಂದ 21ರ ತನಕ ನಡೆಯಲಿದೆ.
ಭಾರತದ ಮಹಿಳಾ ತಂಡ ಬ್ಯಾಂಕಾಂಗ್‌ನಲ್ಲಿ ಕೊನೆಯ ಬಾರಿ ಏಷ್ಯಾಕಪ್‌ನ್ನು ಆಡಿತ್ತು. ಅಜೇಯ ಗೆಲುವಿನ ದಾಖಲೆಯೊಂದಿಗೆ ಏಷ್ಯಾಕಪ್‌ನ್ನು ಜಯಿಸಿತ್ತು. ಏಷ್ಯಾಕಪ್‌ನಲ್ಲಿ ಆಡಿದ್ದ ಇಬ್ಬರು ಪ್ರಮುಖ ಆಟಗಾರ್ತಿಯರು ಪ್ರಸ್ತುತ ಆಸ್ಟ್ರೇಲಿಯದಲ್ಲಿ ಬಿಗ್ ಬಾಶ್ ಟೂರ್ನಿಯಲ್ಲಿ ಆಡುತ್ತಿದ್ದಾರೆ.
ಭಾರತ ಆಡಲಿರುವ ಮುಂದಿನ ಪ್ರಮುಖ ಟೂರ್ನಿ ವಿಶ್ವಕಪ್ ಕ್ವಾಲಿಫೈಯರ್. ಈ ಟೂರ್ನಿಯಲ್ಲಿ ಎ ಗುಂಪಿನಲ್ಲಿರುವ ಭಾರತ ತಂಡ ಶ್ರೀಲಂಕಾ, ಐರ್ಲೆಂಡ್, ಝಿಂಬಾಬ್ವೆ ಹಾಗೂ ಥಾಯ್ಲೆಂಡ್ ತಂಡದೊಂದಿಗೆ ಸ್ಥಾನ ಪಡೆದಿದೆ. ಬಿ ಗುಂಪಿನಲ್ಲಿ ದ.ಆಫ್ರಿಕ, ಪಾಕಿಸ್ತಾನ, ಬಾಂಗ್ಲಾದೇಶ, ಸ್ಕಾಟ್ಲೆಂಡ್ ಹಾಗೂ ಪಿಎನ್‌ಜಿ ತಂಡಗಳಿವೆ.
ಭಾರತ ಫೆ.7 ರಂದು ಶ್ರೀಲಂಕಾದ ವಿರುದ್ಧ ಅರ್ಹತಾ ಪಂದ್ಯವನ್ನು ಆಡುವ ಮೊದಲು ದಕ್ಷಿಣ ಆಫ್ರಿಕದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ.
ಪ್ರತಿ ತಂಡಗಳು ಮೊದಲ ಸುತ್ತಿನಲ್ಲಿ 4 ಪಂದ್ಯಗಳನ್ನು ಆಡುತ್ತವೆ. ಪ್ರತಿ ಗುಂಪಿನಲ್ಲಿ ಅಗ್ರ-3 ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ತಲುಪಲಿವೆ. ಸೂಪರ್-6ಹಂತದ ಅಗ್ರ 4 ತಂಡಗಳು ಇತರ ಗುಂಪಿನೊಂದಿಗೆ ತಲಾ3 ಪಂದ್ಯಗಳನ್ನಾಡುತ್ತವೆ. ವಿಶ್ವಕಪ್ ಟೂರ್ನಿ ಇಂಗ್ಲೆಂಡ್‌ನಲ್ಲಿ ಜೂ.26 ರಿಂದ ಜು.23ರ ತನಕ ನಡೆಯಲಿದೆ.
ಭಾರತ ತಂಡ: ಮಿಥಾಲಿ ರಾಜ್(ನಾಯಕಿ), ಹರ್ಮನ್‌ಪ್ರೀತ್ ಕೌರ್, ಸ್ಮತಿ ಮಂಧಾನಾ, ತಿರುಶ್ ಕಾಮಿನಿ, ವೇದಾ ಕೃಷ್ಣಮೂರ್ತಿ, ದೇವಿಕಾ ವೈದ್ಯ, ಸುಶ್ಮಾ ವರ್ಮ, ಜುಲಾನ್ ಗೋಸ್ವಾಮಿ, ಶಿಖಾ ಪಾಂಡೆ, ಸುಕನ್ಯಾ ಪರಿದ, ಪೂನಂ ಯಾದವ್, ಎಕ್ತಾ ಬಿಶ್ತ್, ರಾಜೇಶ್ವರಿ ಗಾಯಕ್ವಾಡ್, ದೀಪ್ತಿ ಶರ್ಮ.