ವೈರಲ್ ವೀಡಿಯೊ : ಮೋದಿಯ ತಿಜೋರಿ ಒಡೆದ ಕೇಜ್ರಿವಾಲ್!
ಹೊಸದಿಲ್ಲಿ,ಜ.3: ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತೊಮ್ಮೆ ಇಂಟರ್‌ನೆಟ್‌ನಲ್ಲಿ ವಿಜೃಂಭಿಸುತ್ತಿದ್ದಾರೆ. ಕೇಜ್ರಿ ಪ್ರಧಾನಿ ನರೇಂದ್ರ ಮೋದಿಯವರ ‘ತಿಜೋರಿ ’ಯನ್ನು ಒಡೆದು ಎರಡು ಹೊತ್ತಿಗೆಗಳನ್ನು ಹೊರಗೆ ತೆಗೆಯುತ್ತಿರುವ ಮತ್ತು ಇವು ಪ್ರಧಾನಿಯ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿರುವ ದಾಖಲೆಗಳು ಎಂದು ಹೇಳುವ ವೀಡಿಯೊ ವೈರಲ್ ಆಗಿದೆ. ಇದರ ಪೂರ್ಣ ಪ್ರಾತ್ಯಕ್ಷಿಕೆ ಹರ್ಯಾಣದಲ್ಲಿಯ ‘ತಿಜೋರಿ ತೋಡ್,ಭಂಡಾ ಫೋಡ್ ’ಹೆಸರಿನ ರ್ಯಾಲಿಯಲ್ಲಿ ನಡೆದಿದೆ.
ಅಂದ ಹಾಗೆ ಇದೇ ರ್ಯಾಲಿಯಲ್ಲಿ ವ್ಯಕ್ತಿಯೋರ್ವ ಕೇಜ್ರಿ ವಿರುದ್ಧ ‘ಶೂ ಬಾಣ’ವನ್ನು ಪ್ರಯೋಗಿಸಿದ್ದು, ಆಪ್ ಕಾರ್ಯಕರ್ತರು ಆತನನ್ನು ಹಿಡಿದು ಚೆನ್ನಾಗಿ ತದುಕಿ ಪೊಲೀಸರಿಗೊಪ್ಪಿಸಿದ್ದಾರೆ. ತಾನು ಕೇಜ್ರಿವಾಲ್‌ರನ್ನು ಗುರಿಯಾಗಿಸಿಕೊಂಡು ಶೂ ಬೀಸಿದ್ದಲ್ಲ. ವೇದಿಕೆಯ ಮೇಲಿದ್ದ ಕಪಾಟಿನತ್ತ ಎಸೆದಿದ್ದೆ ಎಂದಾತ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್,‘‘ಮೋದಿ ಹೇಡಿಯೆಂದು ನಾನು ಮೊದಲೇ ಹೇಳಿದ್ದೆ. ಮೋದಿಜಿ,ನೀವು ನಿಮ್ಮ ಚಮಚಾಗಳ ಮೂಲಕ ನಮ್ಮತ್ತ ಶೂ ಬಾಣ ಬಿಟ್ಟಿದ್ದೀರಿ. ನಾವೂ ಇದನ್ನು ಮಾಡಬಲ್ಲೆವು. ಆದರೆ ನಮ್ಮ ಸಂಸ್ಕಾರವು ಇದಕ್ಕೆ ಅನುಮತಿ ನೀಡುವುದಿಲ್ಲ ಎಂದು ಟ್ವೀಟಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಅಗಿರುವ ವೀಡಿಯೊದಲ್ಲಿ ಕೈಯಲ್ಲಿ ಮೈಕ್ ಹಿಡಿದಿರುವ ದಿಲ್ಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಕೇಜ್ರಿ ಸಾಥ್ ನೀಡಿದ್ದಾರೆ. ಕಪಾಟಿನ ಮೇಲೆ ಮೋದಿ ಚಿತ್ರವಿದ್ದು ’ನರೇಂದ್ರ ಮೋದಿ ಕಿ ತಿಜೋರಿ ’ಎಂಬ ಬರಹವನ್ನೂ ಹೊಂದಿದೆ. ಕಪಾಟನ್ನು ‘ಒಡೆಯುವ ’ ಕೇಜ್ರಿವಾಲ್ ಅದರಿಂದ ಎರಡು ದಾಖಲೆಗಳ ಹೊತ್ತಿಗೆಗಳನ್ನು ಹೊರತೆಗೆಯುತ್ತಾರೆ. ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಸಹಾರಾ ಮತ್ತು ಬಿರ್ಲಾ ಗುಂಪುಗಳಿಂದ ಹಣವನ್ನು ಪಡೆದಿದ್ದರು ಎಂದು ಕೇಜ್ರಿ ಆರೋಪಿಸುತ್ತಾರೆ. 2013ರಲ್ಲಿ ಆದಿತ್ಯ ಬಿರ್ಲಾ ಸಮೂಹದ ಮೇಲಿನ ದಾಳಿ ಸಂದರ್ಭ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಈ ದಾಖಲೆಗಳು ಗುಜರಾತ್ ಸಿಎಂಗೆ 25 ಕೋ.ರೂ. ಕೊಡಬೇಕಾಗಿದ್ದು, 12 ಕೋ.ರೂ.ಗಳನ್ನು ನೀಡಲಾಗಿದೆ ಎನ್ನುವುದನ್ನು ತೋರಿಸುತ್ತಿವೆ ಎಂದು ಹೇಳುವ ಕೇಜ್ರಿವಾಲ್, ತಾನು ಪ್ರಧಾನಿಯಾದ ಬಳಿಕ ಮೋದಿ ಈ ಆರೋಪಗಳ ಬಗ್ಗೆ ತನಿಖೆಯನ್ನೇಕೆ ನಡೆಸಿಲ್ಲವೆಂದು ಪ್ರಶ್ನಿಸಿದ್ದರೆ. ನೋಟು ರದ್ದತಿ ದೇಶದ ಅತ್ಯಂತ ದೊಡ್ಡ ಹಗರಣಗಳಲ್ಲೊಂದು ಎಂದು ಅವರು ಹೇಳಿದ್ದಾರೆ.
This guy is the chief minister of Delhi. pic.twitter.com/734xEKr4ew
— Smoking Skills (@SmokingSkills_) January 1, 2017