×
Ad

ಯುಪಿಎ ಯೋಜನೆಗಳನ್ನು ಜಾರಿ ಮಾಡಿ ಪ್ರಶಂಸೆಗೆ ಪ್ರಯತ್ನ

Update: 2017-01-03 23:54 IST

ಮುಂಬೈ, ಜ.3: ಹೊಸ ವರ್ಷದ ಹಿಂದಿನ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿದ ಮಾಡಿದ ಭಾಷಣವನ್ನು ಟೀಕಿಸಿರುವ ಶಿವಸೇನೆ, ಘೋಷಣೆಗಳಲ್ಲಿ ಬಹುಪಾಲು ಯೋಜನೆಗಳು ಯುಪಿಎ ಸರಕಾರದ ಸಂದರ್ಭದಲ್ಲಿ ಆರಂಭಿಸಲಾಗಿದ್ದವು ಎಂದು ಹೇಳಿದೆ. ನೋಟು ಅಮಾನ್ಯದ ನಂತರ ಪರಿಸ್ಥಿತಿ ಸುಧಾರಿಸಲು ಇನ್ನೆಷ್ಟು ಬಲಿದಾನಗಳು ಬೇಕು ಎಂದೂ ಪ್ರಶ್ನಿಸಿದೆ.

ಕೇಂದ್ರದ ಎನ್‌ಡಿಎ ಸರಕಾರದ ಸಹಯೋಗಿ ಪಕ್ಷವಾಗಿರುವ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದ ಲೇಖನದಲ್ಲಿ ಪ್ರಧಾನಿ ಭಾಷಣವನ್ನು ತೀವ್ರವಾಗಿ ಖಂಡಿಸಿದ್ದು, ಮೋದಿಯವರು ರಾಷ್ಟ್ರವನ್ನುದ್ದೇಶಿಸಿ ನಡೆಸಿದ ಭಾಷಣದಲ್ಲಿ ಜನರ ನೋವುಗಳಿಗೆ ದನಿಯಾಗುವ ನಿರೀಕ್ಷೆ ಇತ್ತು. ಆದರೆ ಪ್ರಧಾನಿ ತಮ್ಮ ಭಾಷಣದಲ್ಲಿ ಸ್ವಲ್ಪವೂ ಗಂಭೀರತೆ ಪ್ರಕಟಿಸಿಲ್ಲ. ಸರತಿ ಸಾಲಿನಲ್ಲಿ ನಿಂತು 400ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎಲ್ಲಾ ಮೃತರ ಕುಟುಂಬಗಳು ಸರಕಾರವನ್ನು ಹೀಗಳೆಯುತ್ತಿವೆ. ಹೀಗೆ ಸರತಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಮೋದಿಯವರ ಘೋಷಣೆಯಿಂದ ಪ್ರಭಾವಿತರಾಗಿಲ್ಲ ಎಂದು ಸಾಮ್ನಾ ಬರೆದಿದೆ. ಮೋದಿಯವರ ಮೂಲಕ ಘೋಷಿಸಿದ ಯೋಜನೆಗಳು ಹಿಂದಿನ ಸರಕಾರದ ಅವಧಿಯಲ್ಲೇ ಚಾಲ್ತಿಯಲ್ಲಿದೆ. ಗರ್ಭಿಣಿ ಮಹಿಳೆಯರಿಗೆ ರೂ. 6,000 ಕೊಡುವ ಘೋಷಣೆಯಂತೂ 2013ರಿಂದಲೇ ಜಾರಿಯಲ್ಲಿದೆ ಎಂದು ಜನರು ಅಭಿಪ್ರಾಯಪಡುತ್ತಿದ್ದಾರೆ. ರೈತರಿಗೆ ಘೋಷಿಸಲಾಗಿರುವ ಯೋಜನೆಗಳಲ್ಲೂ ಸಮಸ್ಯೆಯಿದೆ. ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ಸಂಗ್ರಹವಾಗಿರುವ ಚಲನ್ ರಹಿತ ನೋಟುಗಳನ್ನು ಸ್ವೀಕರಿಸಲು ಆರ್‌ಬಿಐ ತಯಾರಿಲ್ಲ. ಹೀಗಿರುವಾಗ ಈ ಬ್ಯಾಂಕುಗಳು ಆರ್ಥಿಕ ನಷ್ಟ ಅನುಭವಿಸಲಿವೆ. ಕೃಷಿ ಸಾಲದ ಹೊರೆ ಸರಕಾರ ಹೊರಲಿದೆ ಎಂದು ಪ್ರಧಾನಿ ಘೋಷಿಸಿದ್ದಾರೆ. ಆದರೆ ಈ ಬ್ಯಾಂಕುಗಳು ಇಷ್ಟೊಂದು ದೊಡ್ಡ ಹೊರೆಯನ್ನು ಹೇಗೆ ನಿಭಾಯಿಸಲಿವೆ? ಜನರಿಗೆ ತೀವ್ರ ಸಮಸ್ಯೆಗಳಾಗುತ್ತಿವೆ. ಆದರೆ ಈ ಸಮಸ್ಯೆ ಯಾವಾಗ ನಿವಾರಣೆಯಾಗಲಿದೆ ಎನ್ನುವ ಬಗ್ಗೆ ಪ್ರಧಾನಿ ಸ್ಪಷ್ಟವಾಗಿ ಏನೂ ಹೇಳಿಲ್ಲ ಎಂದು ಸಾಮ್ನಾ ಹೇಳಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News