ಹೊಸ ಪಾಸ್‌ಪೋರ್ಟ್ ನಿಯಮಾವಳಿ

Update: 2017-01-03 18:26 GMT

ಇಂದಿನ ಸಾಮಾಜಿಕ ಅಗತ್ಯಗಳಿಗೆ ಅನುಗುಣವಾಗಿ, ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಶ್ಮಾ ಸ್ವರಾಜ್, ಹೊಸ ಪಾಸ್‌ಪೋರ್ಟ್ ಅರ್ಜಿ ಪ್ರಕ್ರಿಯೆಯ ನಿಯಮಾವಳಿಗಳನ್ನು ಘೋಷಿಸಿದ್ದಾರೆ.

ಅನಾಥ ಮಕ್ಕಳು, ಒಂಟಿ ತಾಯಂದಿರು, ಸರಕಾರಿ ನೌಕರರು ಹಾಗೂ ಸಾಧುಗಳು ಸೇರಿದಂತೆ ವಿವಿಧ ವರ್ಗದವರಿಗೆ ಹೊಸ ನಿಯಮಾವಳಿಗಳನ್ನು ರೂಪಿಸಲಾಗಿದೆ.

ಪಾಸ್‌ಪೋರ್ಟ್‌ನಲ್ಲಿ ಹೊಸ ನಿಯಮಾವಳಿಯ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

‘‘ಮೇಡಮ್, ನೀವು ಪುತ್ರಿಯ ಅರ್ಜಿ ನಮೂನೆಯಲ್ಲಿ ತಂದೆಯ ಹೆಸರು ನಮೂದಿಸಿಲ್ಲ’’

‘‘ನಾವು ಜತೆಗಿಲ್ಲ. ನಾನು ಒಬ್ಬಂಟಿ ತಾಯಿ’’

‘‘ಒಹ್! ಆತನ ಹೆಸರು ನಮೂದಿಸಿ ಮತ್ತು ಅವರ ಅನುಮತಿ ಪಡೆಯಿರಿ’’

‘‘ಇದು ಕೇವಲ ಹೆಸರು. ತಂದೆಯ ಹೆಸರು ಮತ್ತು ಅನುಮತಿ ಇಲ್ಲದೇ ನಾವು ಮುಂದುವರಿಯುವಂತಿಲ್ಲ.’’

ಕೆಲ ವರ್ಷಗಳ ಹಿಂದೆ ಹೊಸದಿಲ್ಲಿಯಲ್ಲಿರುವ ಪಾಸ್‌ಪೋರ್ಟ್ ಕಚೇರಿಯಲ್ಲಿ ಕೇಳಿ ಬರುತ್ತಿದ್ದ ಸಂಭಾಷಣೆಯ ತುಣುಕುಗಳಿವು. ಆದರೆ ಇದೀಗ ಆ ಜಮಾನ ಮುಗಿದ ಅಧ್ಯಾಯ. ಇಂದಿನ ಸಾಮಾಜಿಕ ಅಗತ್ಯಗಳಿಗೆ ಅನುಗುಣವಾಗಿ, ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಶ್ಮಾ ಸ್ವರಾಜ್, ಹೊಸ ಪಾಸ್‌ಪೋರ್ಟ್ ಅರ್ಜಿ ಪ್ರಕ್ರಿಯೆಯ ನಿಯಮಾವಳಿಗಳನ್ನು ಘೋಷಿಸಿದ್ದಾರೆ.

ಅನಾಥ ಮಕ್ಕಳು, ಒಂಟಿ ತಾಯಂದಿರು, ಸರಕಾರಿ ನೌಕರರು ಹಾಗೂ ಸಾಧುಗಳು ಸೇರಿದಂತೆ ವಿವಿಧ ವರ್ಗದವರಿಗೆ ಹೊಸ ನಿಯಮಾವಳಿಗಳನ್ನು ರೂಪಿಸಲಾಗಿದೆ.

ಪಾಸ್‌ಪೋರ್ಟ್‌ನಲ್ಲಿ ಹೊಸ ನಿಯಮಾವಳಿಯ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

1. ಜನ್ಮದಿನಾಂಕದ ಪುರಾವೆ

ಹಿಂದೆ

1989ರ ಜನವರಿ 26 ಅಥವಾ ಆ ಬಳಿಕ ಜನಿಸಿದ ಎಲ್ಲ ಅರ್ಜಿದಾರರೂ, ಜನ್ಮದಿನಾಂಕಕ್ಕೆ ಪುರಾವೆಯಾಗಿ ಜನ್ಮ ದೃಢೀಕರಣ ಪತ್ರ ಸಲ್ಲಿಸುವುದು ಕಡ್ಡಾಯ.

ಈಗ

ಹೊಸ ನಿಯಮಾವಳಿಯ ಪ್ರಕಾರ, ಪಾಸ್‌ಪೋರ್ಟ್ ಪ್ರಾಧಿಕಾರವು ನಮೂದಿಸಿದ ಎಂಟು ವಿಭಿನ್ನ ದಾಖಲೆಗಳ ಪೈಕಿ ಯಾವುದನ್ನಾದರೂ ಜನ್ಮದಿನಾಂಕದ ದೃಢೀಕರಣಕ್ಕಾಗಿ ಸಲ್ಲಿಸಬಹುದಾಗಿದೆ. ಈ ದಾಖಲೆಗಳೆಂದರೆ:

* ಜನನ ಮತ್ತು ಮರಣ ನೋಂದಣಿ ಕಾಯ್ದೆ- 1969ರ ಅನ್ವಯ ಯಾವುದೇ ಮಹಾನಗರ ಪಾಲಿಕೆ ಅಥವಾ ಪ್ರಾಧಿಕಾರಗಳ ಜನನ ಮತ್ತು ಮರಣ ನೋಂದಣಾಧಿಕಾರಿಯವರು ಭಾರತದಲ್ಲಿ ಹುಟ್ಟಿದ ಮಗುವಿಗೆ ನೀಡುವ ಜನ್ಮ ಪ್ರಮಾಣಪತ್ರ. * ಕಡೆಯದಾಗಿ ಹಾಜರಾದ ಶಾಲೆ/ ಅಂಗೀಕೃತ ಶಿಕ್ಷಣ ಮಂಡಳಿ ನೀಡುವ, ಅರ್ಜಿದಾರನ ಜನ್ಮದಿನಾಂಕವನ್ನು ಒಳಗೊಂಡ ಟ್ರಾನ್ಸ್‌ಫರ್/ ಸ್ಕೂಲ್ ಲೀವಿಂಗ್/ ಮೆಟ್ರಿಕ್ ಪ್ರಮಾಣಪತ್ರ. * ಆದಾಯ ತೆರಿಗೆ ಇಲಾಖೆ ವಿತರಿಸುವ, ಅರ್ಜಿದಾರನ ಜನ್ಮದಿನಾಂಕ ವಿವರ ಒಳಗೊಂಡ ಪಾನ್ ಕಾರ್ಡ್.

* ಅರ್ಜಿದಾರನ ಜನ್ಮದಿನಾಂಕ ವಿವರ ಒಳಗೊಂಡ ಆಧಾರ್ ಕಾರ್ಡ್/ ಇ- ಆಧಾರ್.

* ಅರ್ಜಿದಾರ ಸರಕಾರಿ ನೌಕರನಾಗಿದ್ದಲ್ಲಿ, ಸೇವಾ ದಾಖಲೆಯ ಪ್ರತಿ ಅಥವಾ ನಿವೃತ್ತ ನೌಕರನಾಗಿದ್ದರೆ, ಅವರ ಜನ್ಮದಿನಾಂಕದ ವಿವರ ಒಳಗೊಂಡ ಪಿಂಚಣಿ ಪಾವತಿ ಆದೇಶ. ಇದನ್ನು ಆಯಾ ಸಚಿವಾಲಯದ ಅಥವಾ ಇಲಾಖೆಯ ಆಡಳಿತದ ಹೊಣೆ ಹೊಂದಿರುವ ಅಧಿಕಾರಿಗಳು ದೃಢೀಕರಿಸಿರಬೇಕು. * ಆಯಾ ರಾಜ್ಯ ಸರಕಾರಗಳ ಸಾರಿಗೆ ಇಲಾಖೆ ನೀಡಿರುವ ಅರ್ಜಿದಾರನ ಜನ್ಮದಿನಾಂಕ ವಿವರ ಒಳಗೊಂಡ ಚಾಲನಾ ಪರವಾನಿಗೆ.

* ಭಾರತದ ಚುನಾವಣಾ ಆಯೋಗ ವಿತರಿಸಿದ, ಅರ್ಜಿದಾರನ ಜನ್ಮದಿನಾಂಕ ವಿವರ ಒಳಗೊಂಡ ಚುನಾವಣಾ ಫೋಟೊ ಗುರುತಿನ ಚೀಟಿ (ಇಪಿಐಸಿ).

* ಸರಕಾರಿ ಜೀವವಿಮಾ ನಿಗಮ ಅಥವಾ ಕಂಪೆನಿಗಳು ಬಿಡುಗಡೆ ಮಾಡಿರುವ, ಅರ್ಜಿದಾರನ ಜನ್ಮದಿನಾಂಕ ವಿವರ ಒಳಗೊಂಡ ವಿಮಾ ಪಾಲಿಸಿ ಬಾಂಡ್.

2. ಒಬ್ಬ ಪೋಷಕನ/ಳ ಅಥವಾ ಕಾನೂನುಬದ್ಧ ಪಾಲಕನ/ಳ ಹೆಸರು

ಅರ್ಜಿದಾರ ತಾಯಿ/ಮಗು ತಂದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು ಎನ್ನುವುದೂ ಸೇರಿದಂತೆ ಪಾಸ್‌ಪೋರ್ಟ್ ಅರ್ಜಿಗಳಿಗೆ ಸಂಬಂಧಿಸಿದ ಮತ್ತು ದತ್ತು ಪಡೆದ, ಏಕ ಪೋಷಕರನ್ನು ಹೊಂದಿದ ಮಕ್ಕಳು ಅರ್ಜಿ ಸಲ್ಲಿಸುವಾಗ ಎದುರಾಗುವ ವಿವಿಧ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ನೇಮಕ ಮಾಡಲಾಗಿತ್ತು.

ಈ ಸಮಿತಿ ನೀಡಿದ ವರದಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಂಗೀಕರಿಸಿದೆ.

ಹಿಂದೆ

ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ವ್ಯಕ್ತಿ ಇಬ್ಬರೂ ಪೋಷಕರ ಹೆಸರನ್ನು ನಮೂದಿಸುವುದು ಕಡ್ಡಾಯವಾಗಿತ್ತು.

ಈಗ

* ಇದೀಗ ಆನ್‌ಲೈನ್ ಪಾಸ್‌ಪೋರ್ಟ್ ಅರ್ಜಿ ನಮೂನೆ ಗಳನ್ನು ಸಲ್ಲಿಸುವಾಗ, ಅರ್ಜಿದಾರ ತಂದೆ ಅಥವಾ ತಾಯಿ ಅಥವಾ ಕಾನೂನುಬದ್ಧ ಫೋಷಕರ ಪೈಕಿ ಯಾರ ಹೆಸರನ್ನಾದರೂ ನಮೂ ದಿಸಲು ಅವಕಾಶವಿದೆ. ಅಂದರೆ ಇಬ್ಬರು ಪೋಷಕರ ಬದಲಾಗಿ ಏಕ ಪೋಷಕರ ಹೆಸರು ನಮೂದಿಸಿದರೆ ಸಾಕು. ಇದರಿಂದಾಗಿ ಏಕಪೋಷಕರು ತಮ್ಮ ಮಕ್ಕಳ ಪಾಸ್‌ಪೋರ್ಟ್ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ.

* ಪಾಸ್‌ಪೋರ್ಟ್ ಅರ್ಜಿ ನಮೂನೆಯಲ್ಲಿ ಅರ್ಜಿದಾರರು ವಿಚ್ಛೇದಿತರಾಗಿದ್ದಲ್ಲಿ ಅಥವಾ ಪ್ರತ್ಯೇಕವಾಗಿದ್ದಲ್ಲಿ ತಮ್ಮ ಪತಿ/ ಪತ್ನಿಯ ಹೆಸರನ್ನು ನಮೂದಿಸುವ ಅಗತ್ಯವಿಲ್ಲ. ಇಂಥ ಅರ್ಜಿದಾರರು ತಮ್ಮ ವಿಚ್ಛೇದನ ಆದೇಶವನ್ನೂ ಸಲ್ಲಿಸುವ ಅಗತ್ಯವಿಲ್ಲ.

3. ಅನುಬಂಧ ಸಂಖ್ಯೆ ಕಡಿತ

* ಪಾಸ್‌ಪೋರ್ಟ್ ನಿಯಮಾವಳಿ- 1980ರಲ್ಲಿ ನಿರ್ದಿಷ್ಟ ಪಡಿಸಲಾದ ಒಟ್ಟು ಅನುಬಂಧಗಳ ಸಂಖ್ಯೆಯನ್ನು 15ರಿಂದ 9ಕ್ಕೆ ಇಳಿಸಲಾಗಿದೆ. ಅನುಬಂಧ ಎ,ಸಿ,ಡಿ,ಇ,ಜೆ ಹಾಗೂ ಕೆಗಳನ್ನು ಕಿತ್ತು ಹಾಕಲಾಗಿದ್ದು, ಕೆಲ ಅನುಬಂಧಗಳನ್ನು ವಿಲೀನಗೊಳಿಸಲಾಗಿದೆ.

* ಅರ್ಜಿದಾರರು ಸಲ್ಲಿಸಬೇಕಿರುವ ಎಲ್ಲ ಅನುಬಂಧಗಳು ಖಾಲಿ ಹಾಳೆಯಲ್ಲಿ ಸ್ವಯಂ ದೃಢೀಕರಣ ಪತ್ರದ ರೂಪದಲ್ಲಿದ್ದರೆ ಸಾಕು. ಇದಕ್ಕೆ ಅಧಿಕಾರಿಯ ದೃಢೀಕರಣ, ನೋಟರಿ ಮುಂದೆ ದೃಢೀಕರಿಸಿಕೊಳ್ಳುವುದು, ಆಡಳಿತಾತ್ಮಕ ನ್ಯಾಯಾಧೀಶರ ಮುಂದೆ ಅಥವಾ ಪ್ರಥಮದರ್ಜೆ ನ್ಯಾಯಿಕ ಅಧಿಕಾರಿ ಮುಂದೆ ದೃಢೀಕರಣ ಮಾಡಿಕೊಳ್ಳುವ ಅಗತ್ಯವಿಲ್ಲ.

4. ವಿವಾಹಿತ ಅರ್ಜಿದಾರರು ಅನುಬಂಧ ಕೆ ಅನ್ನು ಅಥವಾ ಯಾವುದೇ ವಿವಾಹ ದೃಢೀಕರಣ ಪತ್ರ ಸಲ್ಲಿಸುವ ಅಗತ್ಯವಿಲ್ಲ.

5. ಅನಾಥ ಮಕ್ಕಳಿಗೆ ಯಾವುದೇ ಜನ್ಮದಿನಾಂಕ ದೃಢೀಕರಣ ಪತ್ರ ಇಲ್ಲದಿದ್ದರೆ ಅಥವಾ ಮೆಟ್ರಿಕ್ ಸರ್ಟಿಫಿಕೆಟ್ ಅಥವಾ ನ್ಯಾಯಾಲಯದ ಘೋಷಣಾ ಆದೇಶ ಇಲ್ಲದಿದ್ದರೆ ಅಂಥ ಅರ್ಜಿದಾರರು, ಅನಾಥಾಲಯಗಳ ಮುಖ್ಯಸ್ಥರು/ ಮಕ್ಕಳ ಪಾಲನಾ ಕೇಂದ್ರದ ಮುಖ್ಯಸ್ಥರಿಂದ ಅಧಿಕೃತ ಲೆಟರ್‌ಹೆಡ್‌ನಲ್ಲಿ ನೀಡುವ ಜನ್ಮದಿನಾಂಕ ದೃಢೀಕರಣ ಪತ್ರ ಸಲ್ಲಿಸಬಹುದಾಗಿದೆ.

6. ವಿವಾಹೇತರ ಸಂಬಂಧಗಳಿಂದ ಹುಟ್ಟಿದ ಮಕ್ಕಳಾಗಿದ್ದಲ್ಲಿ, ಅಂಥ ಅರ್ಜಿದಾರರು ಪಾಸ್‌ಪೋರ್ಟ್ ಅರ್ಜಿಯ ಜತೆಗೆ ಅನುಬಂಧ ಜಿ ಮಾತ್ರ ಸಲ್ಲಿಸಬೇಕಾಗುತ್ತದೆ.

7. ದೇಶೀಯವಾಗಿ ದತ್ತು ಪಡೆದ ಮಕ್ಕಳಾಗಿದ್ದಲ್ಲಿ, ಅಂಥವರಿಗೆ ಪಾಸ್‌ಪೋರ್ಟ್ ನೀಡಲು, ದತ್ತುಸ್ವೀಕಾರದ ನೋಂದಾಯಿತ ಕರಾರುಪತ್ರವನ್ನು ಸಲ್ಲಿಸುವುದು ಬೇಕಾಗಿಲ್ಲ. ಈ ಸಂಬಂಧ ಯಾವುದೇ ಕರಾರುಪತ್ರ ಇಲ್ಲದಿದ್ದರೂ, ಪಾಸ್‌ಪೋರ್ಟ್ ಅರ್ಜಿದಾರ ಖಾಲಿ ಹಾಳೆಯಲ್ಲಿ ಸ್ವಯಂ ದೃಢೀಕರಣ ನೀಡಿ, ದತ್ತು ಸ್ವೀಕಾರವನ್ನು ಖಾತ್ರಿಪಡಿಸಬಹುದಾಗಿದೆ.

8. ಗುರುತು ಪ್ರಮಾಣಪತ್ರವನ್ನು (ಅನುಬಂಧ ಬಿ)/ ನಿರಾಕ್ಷೇಪಣಾ ಪತ್ರ (ಅನುಬಂಧ ಎಂ)ವನ್ನು ಸಂಬಂಧಿತ ಉದ್ಯೋಗದಾತರಿಂದ ಪಡೆಯಲು ಸಾಧ್ಯವಾಗದ ಸರಕಾರಿ ನೌಕರರು, ತುರ್ತಾಗಿ ಪಾಸ್‌ಪೋರ್ಟ್ ಪಡೆಯಬೇಕಿದ್ದ ಸಂದರ್ಭದಲ್ಲಿ, ಅನುಬಂಧ ಎನ್ ನಮೂನೆಯ ಸ್ವಯಂ ದೃಢೀಕರಣ ಪತ್ರ ಸಲ್ಲಿಸಬಹುದಾಗಿದೆ. ಆದರೆ ಅಂಥ ಸಂದರ್ಭದಲ್ಲಿ, ಪಾಸ್‌ಪೋರ್ಟ್ ವಿತರಣಾ ಪ್ರಾಧಿಕಾರಕ್ಕೆ, ಸಾಮಾನ್ಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಮಾಹಿತಿ ನೀಡಬೇಕಾಗುತ್ತದೆ.

9. ಸಾಧುಗಳು ಹಾಗೂ ಸನ್ಯಾಸಿಗಳು ಪಾಸ್‌ಪೋರ್ಟ್ ಗೆ ಅರ್ಜಿ ಸಲ್ಲಿಸುವಾಗ, ತಮ್ಮ ಮೂಲ ಪೋಷಕರ ಹೆಸರಿನ ಬದಲಾಗಿ, ತಮ್ಮ ಆಧ್ಯಾತ್ಮಿಕ ಗುರುವಿನ ಹೆಸರನ್ನು ನಮೂದಿಸಲು ಅವಕಾಶವಿದೆ. ಆದರೆ ಇದಕ್ಕೆ, ಭಾರತದ ಚುನಾವಣಾ ಆಯೋಗ ವಿತರಿಸಿರುವ ಫೋಟೊ ಗುರುತಿನ ಚೀಟಿ, ಪಾನ್‌ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ನೀಡಬೇಕಾಗುತ್ತದೆ. ಇಂಥ ಗುರುತಿನ ಪತ್ರದಲ್ಲಿ ಪೋಷಕರ ಹೆಸರಿನ ಎದುರು, ಆಧ್ಯಾತ್ಮಿಕ ಗುರುವಿನ ಹೆಸರು ನಮೂದಿಸಿರಬೇಕು.

ಕೃಪೆ: tripoto.com

Writer - ಗುಂಜನ್ ಉಪ್ರೇತಿ

contributor

Editor - ಗುಂಜನ್ ಉಪ್ರೇತಿ

contributor

Similar News