ನೋಟು ನಿಷೇಧದಿಂದ ಸೇವಾವಲಯ ತತ್ತರ : ಕಳೆದ ಎರಡು ತಿಂಗಳುಗಳಲ್ಲಿ ಗರಿಷ್ಠ ಕುಸಿತ
ಹೊಸದಿಲ್ಲಿ, ಜ.4: ನಗದು ಕೊರತೆಯಿಂದ ತತ್ತರಿಸಿರುವ ಸೇವಾ ವಲಯವು ಸತತ ಎರಡನೆ ತಿಂಗಳು ಕೂಡಾ ಡಿಸೆಂಬರ್‌ನಲ್ಲಿ ತೀವ್ರವಾದ ಕುಸಿತವನ್ನು ಕಂಡಿವೆ. ನೋಟು ನಿಷೇಧದಿಂದಾಗಿ ಉದ್ಯಮ ಚಟುವಟಿಕೆಗಳು ಇಳಿಮುಖವಾಗಿರುವಂತೆಯೇ ಸೇವಾವಲಯವು ಕಳೆದ ಮೂರು ವರ್ಷಗಳಲ್ಲೇ ಗರಿಷ್ಠವಾದ ಕುಸಿತವನ್ನು ಅನುಭವಿಸಿದೆಯೆಂದು ಮಾಸಿಕ ಸಮೀಕ್ಷೆಯೊಂದು ಬುಧವಾರ ಬಹಿರಂಗಪಡಿಸಿದೆ.
ಖರೀದಿ ನಿರ್ವಾಹಕರ ಸೂಚ್ಯಂಕ (ಪಿಎಂಐ)ವು ಕಳೆದ 11 ವರ್ಷಗಳಲ್ಲಿಯೇ ಈ ಬಾರಿ, ದೇಶದಲ್ಲಿ ಔದ್ಯಮಿಕ ಆತ್ಮವಿಶ್ವಾಸವು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿರುವುದನ್ನು ತೋರಿಸಿದೆ. ನೋಟು ನಿಷೇಧದಿಂದಾಗಿ ಉಂಟಾಗಿರುವ ಆರ್ಥಿಕ ಕುಸಿತವು ತಕ್ಷಣದಲ್ಲೇ ಚೇತರಿಕೆಯಾಗುವ ಸಾಧ್ಯತೆಗಳು ತೀರಾ ಕಡಿಮೆಯೆಂದು ಸಮೀಕ್ಷೆ ಹೇಳಿದೆ.
ಸೇವಾವಲಯದ ಪ್ರಗತಿಯನ್ನು ಮಾಸಿಕ ಆಧಾರದಲ್ಲಿ ವೌಲ್ಯಮಾಪನ ನಡೆಸುವ ಸಂಸ್ಥೆಯಾದ ನಿಕ್ಕೆಲ್ ಇಂಡಿಯಾ ಸರ್ವಿಸಸ್‌ನ ಪಿಎಂಐ ಸೂಚ್ಯಂಕವು ಡಿಸೆಂಬರ್‌ನಲ್ಲಿ 46.8 ಅಂಕದಲ್ಲಿ ಸ್ಥಿರಗೊಂಡಿದ್ದು, ಇದು ಹೆಚ್ಚುಕಮ್ಮಿ ನವೆಂಬರ್ ತಿಂಗಳ 46.7 ಅಂಕಗಳಿಗೆ ಸರಿಸಮವಾಗಿದೆ.
ಡಿಸೆಂಬರ್‌ನಲ್ಲಿ ಉತ್ಪಾದನಾ ವಲಯ ಕೂಡಾ ಕಳೆದ ವರ್ಷದಲ್ಲೇ ಅತ್ಯಧಿಕ ಇಳಿಮುಖವನ್ನು ಕಂಡಿದ್ದು, ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ದಲ್ಲಿ ಮಂದಗತಿಯುಂಟಾಗಿರುವುದನ್ನು ಸೂಚಿಸಿದೆ. ಸೇವಾ ಪೂರೈಕೆದಾರರಲ್ಲಿಯೂ ಔದ್ಯಮಿಕ ವಿಶ್ವಾಸದಲ್ಲೂ ಸಹ ಕಳೆದೊಂದು ದಶಕದಲ್ಲಿಯೇ ತೀವ್ರವಾದ ಕುಸಿತವುಂಟಾಗಿದೆ ಎಂದು ವರದಿಯ ಲೇಖಕರಾದ ಲಿಮಾ ತಿಳಿಸಿದ್ದಾರೆ.