ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ. ಚಿನ್ನಪ್ಪಗೌಡ

Update: 2017-01-04 18:38 GMT

ಮಂಗಳೂರು, ಜ.4: ಜನಪದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಅಧ್ಯಯನ ಸಹಿತ ಹಳೆಗನ್ನಡ ಮತ್ತು ಆಧುನಿಕ ಕನ್ನಡ, ತುಳು ಭಾಷಾ ಅಧ್ಯಯನ ನಡೆಸಿರುವ ಡಾ. ಕೆ. ಚಿನ್ನಪ್ಪಗೌಡ ಜ. 27, 28, 29ರಂದು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆಯಲಿರುವ 21ನೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಭೂತಾರಾಧನೆ-ಕೆಲವು ಅಧ್ಯ ಯನಗಳು, ಜಾಲಾಟ, ಭೂತಾ ರಾಧನೆ-ಜನಪದೀಯ ಅಧ್ಯಯನ, ಸಂಸ್ಕೃತಿ ಸಿರಿ ಇತ್ಯಾದಿ ಸಾಹಿತ್ಯಕ ಕೆಲಸ ಗಳನ್ನೂ ಮಾಡಿರುವ ಇವರು ಅನೇಕ ಪುಸ್ತಕಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸೆಮಿನಾರ್‌ಗಳಲ್ಲಿ ಭಾಗವಹಿಸಿದ್ದಾರೆೆ. ಸಂಶೋಧನೆ ಹಾಗೂ ಅಧ್ಯಯನಕ್ಕಾಗಿ ಟರ್ಕಿ, ಫಿನ್ಲೆಂಡ್, ಜರ್ಮನಿ, ಜಪಾನ್ ಇತ್ಯಾದಿ ದೇಶಗಳ ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಿ ದ್ದಾರೆ.

ಬಂಟ್ವಾಳ ತಾಲೂಕಿನ ವಿಟ್ಲ ಕಸಬ ಗ್ರಾಮದ ಕೂಡೂರಿನ ಕೃಷಿ ಕುಟುಂಬ ದಲ್ಲಿ ಜನಿಸಿ ತನ್ನ ಸ್ವಂತ ಪ್ರತಿಭೆಯೊಂದಿಗೆ ವಿದ್ಯಾಕ್ಷೇತ್ರ, ವಿದ್ವತ್‌ಕ್ಷೇತ್ರ, ಜಾನಪದ, ಯಕ್ಷಗಾನ ಹಾಗೂ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸಾಧನೆ ಮಾಡಿದ್ದಾರೆ.

ಡಾ. ಚಿನ್ನಪ್ಪಗೌಡರು ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಮಾರ್ಗದರ್ಶನ ನೀಡಿದ್ದಾರೆ. ಮಂಗಳೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಮೂಡುಬಿದಿರೆಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಯಕ್ಷಗಾನ ಸಾಹಿತ್ಯ ಸಮ್ಮೇಳನ, ಆಳ್ವಾಸ್ ನುಡಿಸಿರಿ, ಮಂಗಳೂರು ವಿಶ್ವವಿದ್ಯಾನಿಲಯದ ಮತ್ತು ಕರ್ನಾಟಕ ಸರಕಾರ, ಜಿಲ್ಲಾಡಳಿತದ ಅನೇಕ ಸಾಹಿತ್ಯ ಸಾಂಸ್ಕೃತಿಕ ಭೂಮಿಕೆಗಳು ಹೀಗೆ ಹಲವು ರಾಜ್ಯಮಟ್ಟದ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಮಾರ್ಗದರ್ಶಕರಾಗಿ ಅವರು ಸಲ್ಲಿಸಿದ ಸೇವೆ ಅಪಾರವಾದುದು. ಇವರ ಸಾಧನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ.

ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ವಾಸುದೇವ ಭೂಪಾಲಂ ಎಂಡೋ ಮೆಂಟ್ ಪ್ರಶಸ್ತಿ, ಡಾ. ಶಿವರಾಮ ಕಾರಂತ ಎಂಡೋಮೆಂಟ್ ಪ್ರಶಸ್ತಿ, ಕು.ಶಿ. ಜಾನಪದ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸಂದೇಶ ಪುರಸ್ಕಾರ, ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿ ಇತ್ಯಾದಿ ಪ್ರಮುಖವಾದವುಗಳಾಗಿವೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಆಗಿ ಸೇವೆಗೈದಿದ್ದ ಇವರು ,ವಿದ್ಯಾರ್ಥಿ ಕ್ಷೇಮನಿಧಿ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಕರ್ನಾಟಕ ರಾಜ್ಯ ತುಳು ಸಾಹಿತ್ಯಅಕಾಡಮಿ ಹಾಗೂ ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ ಎಂದು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News