ರಾಣಿ ಎಲಿಝಬೆತ್ ರನ್ನು ಕೊಂದೇ ಬಿಡುತ್ತಿದ್ದ ಅರಮನೆಯ ಸುರಕ್ಷತಾ ಸಿಬ್ಬಂದಿ !

Update: 2017-01-05 10:41 GMT

ಲಂಡನ್, ಜ. 5: ಬ್ರಿಟನ್ ರಾಣಿ ದ್ವಿತೀಯ ಎಲಿಝಬೆತ್ ಒಮ್ಮೆ ತಡರಾತ್ರಿ ಅರಮನೆ ಮೈದಾನದಲ್ಲಿ ವಾಕಿಂಗ್ ಹೋಗಿದ್ದಾಗ ತನ್ನ ಅಂಗರಕ್ಷಕನೊಬ್ಬನ ಗುಂಡಿನಿಂದ ಸ್ವಲ್ಪದರಲ್ಲೇ ಪಾರಾಗಿದ್ದರು ಎಂಬುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

ಹಲವು ವರ್ಷಗಳ ಹಿಂದೆ ಬೆಳಗ್ಗಿನ ಜಾವ 3 ಗಂಟೆಯ ಹೊತ್ತಿಗೆ ಬಕಿಂಗ್‌ಹ್ಯಾಮ್ ಅರಮನೆಯ ಆವರಣದಲ್ಲಿ ಕತ್ತಲಲ್ಲಿ ಅಜ್ಞಾತ ವ್ಯಕ್ತಿಯೊಬ್ಬರನ್ನು ಕಂಡಾಗ ತಾನು ಗುಂಡು ಹಾರಿಸಲು ಸಿದ್ಧನಾಗಿದ್ದೆ ಎಂಬುದಾಗಿ ಮಾಜಿ ಅಂಗರಕ್ಷಕರೊಬ್ಬರು ಬಹಿರಂಗಪಡಿಸಿದ್ದಾರೆ ಎಂದು ‘ಟೈಮ್ಸ್’ ದೈನಿಕ ಬುಧವಾರ ವರದಿ ಮಾಡಿದೆ.

ಪತ್ರಿಕೆಯ ಡಯರಿ ಅಂಕಣದಲ್ಲಿ ಈ ವರದಿ ಪ್ರಕಟಗೊಂಡಿದೆ. ತನ್ನೆದುರು ಯಾರೋ ಅಪರಿಚಿತ ವ್ಯಕ್ತಿಯೊಬ್ಬ ನಿಂತಿದ್ದಾನೆ ಎಂದು ಭಾವಿಸಿದ ತಾನು, ‘‘ಯಾರದು?’’ ಎಂದು ಅಬ್ಬರಿಸಿದೆ ಎಂದು ಅಂಗರಕ್ಷಕ ಈ ಅಂಕಣದಲ್ಲಿ ಹೇಳಿದ್ದಾರೆ.

‘‘ನಾನು ರಾಣಿ ಎಂದು ಆ ವ್ಯಕ್ತಿ ಹೇಳಿದಾಗ ದಂಗಾಗುವ ಸರದಿ ಅಂಗರಕ್ಷಕನದಾಗಿತ್ತು’’.

‘‘ಬ್ಲಡಿ ಹೆಲ್! ಯುವರ್ ಮೆಜೆಸ್ಟಿ! ನಾನು ಈಗ ನಿಮಗೆ ಗುಂಡು ಹಾರಿಸಿಯೇ ಬಿಡುತ್ತಿದ್ದೆ’’ ಎಂದು ಅಂಗರಕ್ಷಕ ಉದ್ಗರಿಸಿದರು.

ತಾನು ಆತುರದಲ್ಲಿ ಆಡಿದ ಮಾತುಗಳು ಸರಿಯಿರಲಿಲ್ಲ ಎನ್ನುವುದು ಅಂಗರಕ್ಷಕನಿಗೆ ಅರಿವಾದಾಗ, ರಾಣಿ ತನಗೆ ಬಯ್ಯಬಹುದು ಎಂಬುದಾಗಿ ಅವರು ನಿರೀಕ್ಷಿಸಿದ್ದರು.

ಅದಕ್ಕೆ ರಾಣಿ ಈ ರೀತಿ ಪ್ರತಿಕ್ರಿಯಿಸಿದರು: ‘‘ಪರವಾಗಿಲ್ಲ. ಮುಂದಿನ ಸಲ ನಾನು ನಿನಗೆ ಮುಂಚಿತವಾಗಿಯೇ ಹೇಳುತ್ತೇನೆ. ನೀನು ಗುಂಡು ಹಾರಿಸಬೇಕಾಗಿಲ್ಲ’’.

ನಿದ್ದೆ ಬಾರದಿರುವಾಗ ರಾತ್ರಿಯಲ್ಲಿ ನಡೆಯುವ ಅಭ್ಯಾಸವನ್ನು ರಾಣಿ ಹೊಂದಿದ್ದಾರೆ.

ಘಟನೆಗೆ ಪ್ರತಿಕ್ರಿಯೆ ನೀಡಲು ಬಕಿಂಗ್‌ಹ್ಯಾಮ್ ಅರಮನೆ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News