ಮ್ಯಾನ್ಮಾರ್‌ನಿಂದ ತಪ್ಪಿಸಿಕೊಳ್ಳುವ ವೇಳೆ ನದಿಯಲ್ಲಿ ಮುಳುಗಿ ಮೃತಪಟ್ಟ 16 ತಿಂಗಳ ಮಗು
ಢಾಕಾ, ಜ. 5: ಮ್ಯಾನ್ಮಾರ್ ಸೇನೆಯ ದೌರ್ಜನ್ಯದಿಂದ ತಪ್ಪಿಸಿಕೊಂಡು ಬಾಂಗ್ಲಾದೇಶಕ್ಕೆ ಪಲಾಯನಗೈಯುವ ವೇಳೆ ನದಿಯಲ್ಲಿ ಮುಳುಗಿ ಮೃತಪಟ್ಟ ತನ್ನ 16 ತಿಂಗಳ ಮಗುವಿನ ಚಿತ್ರವನ್ನು ರೊಹಿಂಗ್ಯ ಮುಸ್ಲಿಮ್ ಸಮುದಾಯದ ಸಂತ್ರಸ್ತರೊಬ್ಬರು ಬಿಡುಗಡೆಗೊಳಿಸಿದ್ದಾರೆ.
ಇಂಥ ಘಟನೆಗಳನ್ನು ಜಾಗತಿಕ ಸಮುದಾಯದ ಗಣನೆಗೆ ತರುವುದಕ್ಕಾಗಿ ತಾನು ಹೀಗೆ ಮಾಡಬೇಕಾಯಿತು ಎಂದು ಝಾಫರ್ ಅಲಂ ಹೇಳಿದ್ದಾರೆ.
ಮ್ಯಾನ್ಮಾರ್‌ನ ಸೇನೆ ತಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂಬುದಾಗಿ ರೊಹಿಂಗ್ಯ ಮುಸ್ಲಿಮರು ಹೇಳುತ್ತಿದ್ದಾರೆ. ಹಾಗಾಗಿ, ಅಲ್ಲಿಂದ ಪಲಾಯನ ಮಾಡದೆ ತಮಗೆ ಬೇರೆ ಆಯ್ಕೆ ಇಲ್ಲ ಎಂದು ಅವರು ಭಾವಿಸುತ್ತಾರೆ.
ಮ್ಯಾನ್ಮಾರ್ ಸೇನೆ ಜನಾಂಗೀಯ ಹತ್ಯೆಯಲ್ಲಿ ನಿರತವಾಗಿದೆ ಎಂದು ಮಾನವಹಕ್ಕು ಗುಂಪುಗಳು ಹೇಳಿವೆ.
ಮಗು ಮುಹಮ್ಮದ್ ಶೊಹಾಯರ್ ಮತ್ತು ಅವರ ಕುಟುಂಬ ನಫ್ ನದಿಯನ್ನು ದಾಟಿ ಬಾಂಗ್ಲಾದೇಶಕ್ಕೆ ಹೋಗಲು ಪ್ರಯತ್ನಿಸುತ್ತಿತ್ತು. ಈ ಪ್ರಯತ್ನದಲ್ಲಿ ಅವರ ದೋಣಿ ಮುಳುಗಿತು. ಮಗುವಿನ ಮೃತದೇಹ ಬಳಿಕ ನದಿಯ ದಂಡೆಯಲ್ಲಿ ತೇಲಿತು.
ಝಾಫರ್ ಅಲಂ ಸಿಎನ್‌ಎನ್‌ಗೆ ಹೇಳಿದ್ದು: ‘‘ನಮ್ಮ ಗ್ರಾಮಗಳಲ್ಲಿ ಹೆಲಿಕಾಪ್ಟರ್‌ಗಳು ನಮ್ಮತ್ತ ಗುಂಡು ಹಾರಿಸುತ್ತಿವೆ. ಮ್ಯಾನ್ಮಾರ್ ಸೈನಿಕರೂ ನಮ್ಮ ಮೇಲೆ ಗುಂಡು ಹಾರಿಸಿದ್ದಾರೆ. ನನ್ನ ಅಜ್ಜ ಮತ್ತು ಅಜ್ಜಿಯನ್ನು ಸುಟ್ಟು ಕೊಲ್ಲಲಾಗಿದೆ. ನಮ್ಮ ಇಡೀ ಊರನ್ನು ಸೇನೆ ಸುಟ್ಟು ಹಾಕಿದೆ. ಅಲ್ಲಿ ಏನೂ ಉಳಿದಿಲ್ಲ’’.
‘‘ಈ ಚಿತ್ರ (ಮಗುವಿನ ಮೃತದೇಹದ ಚಿತ್ರ)ವನ್ನು ನೋಡುವಾಗ ನನಗೆ ಸಾಯಬೇಕೆಂದು ಅನಿಸುತ್ತದೆ. ಈ ಜಗತ್ತಿನಲ್ಲಿ ಬದುಕುವುದರಲ್ಲಿ ಏನೂ ಅರ್ಥವಿಲ್ಲ’’ ಎಂದರು.
‘‘ನಮ್ಮ ಪರಿಸ್ಥಿತಿಯನ್ನು ಜಗತ್ತು ತಿಳಿದುಕೊಳ್ಳಬೇಕೆಂದು ನಾನು ಬಯಸಿದ್ದೇನೆ. ಮ್ಯಾನ್ಮಾರ್ ಸರಕಾರಕ್ಕೆ ಇನ್ನು ಸಮಯ ನೀಡಬಾರದು. ಕ್ರಮ ತೆಗೆದುಕೊಳ್ಳಲು ನೀವು ಸಮಯ ತೆಗೆದುಕೊಂಡರೆ ಅವರು ಎಲ್ಲ ರೊಹಿಂಗ್ಯರನ್ನು ಕೊಲ್ಲುತ್ತಾರೆ’’ ಎಂದು ಝಾಫರ್ ನುಡಿದರು.