ಸಂಸ್ಕೃತ ಸುಭಾಷಿತ ಬದುಕಿಗೆ ದಾರಿದೀಪ: ಸುಮಿತ್ರಾ ಮಹಾಜನ್

Update: 2017-01-06 15:09 GMT

ಉಡುಪಿ, ಜ.6: ಸಂಸ್ಕೃತ ಭಾಷೆಯ ಕಲಿಕೆಯಿಂದ ಮಕ್ಕಳ ಉಚ್ಛಾರಣೆ ಸ್ಪಷ್ಟಗೊಳ್ಳುವುದು. ವೇದಮಂತ್ರಗಳ ಪಠಣದಿಂದ ನಮ್ಮ ಮನಸ್ಸು ಶುದ್ಧ ಗೊಳ್ಳುವುದು. ಸಂಸ್ಕೃತದಲ್ಲಿರುವ ಸುಭಾಷಿತಗಳ ಅಂಶಗಳು ಉತ್ತಮ ಜೀವನಕ್ಕೆ ಸಹಕಾರಿಯಾಗಿರುತ್ತವೆ. ಇಂತಹ ಸುಭಾಷಿತಗಳನ್ನು ಬಾಲ್ಯ ಕಾಲದಿಂದಲೇ ಕಲಿಸುವ ಪ್ರಯತ್ನ ನಡೆಯಬೇಕು ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಹೇಳಿದ್ದಾರೆ.

ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಸಂಸ್ಕೃತ ಭಾರತಿ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಐದನೇ ಅಖಿಲ ಭಾರತ ಸಂಸ್ಕೃತ ಅಧಿವೇಶನವನ್ನು ಇಂದು ಬೆಳಗ್ಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

 ಎಲ್ಲಾ ಸುಭಾಷಿತಗಳನ್ನು ಅರ್ಥಪೂರ್ಣವಾಗಿ ಅಭ್ಯಾಸ ಮಾಡಿದರೆ ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗಿ ದೇಶದ ಉತ್ತಮ ವ್ಯಕ್ತಿಯಾಗಿ ಮೂಡಿಬರುತ್ತಾನೆ. ಹೀಗಾಗಿ ಸುಭಾಷಿತಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಿದ್ದಂತೆ ಎಂದವರು ಅಭಿಪ್ರಾಯಪಟ್ಟರು.

 ಸಂಸ್ಕೃತ ಪ್ರಾಚೀನ ಭಾಷೆಯಾದರೂ ಅದರಲ್ಲಿರುವ ಸಂಗತಿಗಳು ಇಂದಿಗೂ ಪ್ರಸ್ತುತವಾಗಿವೆ. ವಿಶ್ವಕಲ್ಯಾಣದ ಸೂತ್ರ ಸಂಸ್ಕೃತ ಸಾಹಿತ್ಯ ಹಾಗೂ ವೇದಗಳಲ್ಲಿವೆ. ಸಂಸ್ಕೃತ ಭಾರತದ ಶ್ವಾಸಕೋಶವಿದ್ದಂತೆ. ಮುಂದೊಂದು ದಿನ ಸಂಸ್ಕೃತ ವಿಶ್ವಭಾಷೆ ಯಾಗುವ ವಿಶ್ವಾಸ ತಮಗಿದೆ ಎಂದು ಸುಮಿತ್ರಾ ಮಹಾಜನ್ ಹೇಳಿದರು.

 ಉತ್ತಮ ಗುಣಗಳು ಸಂಸ್ಕೃತ ಸಾಹಿತ್ಯದಲ್ಲಿ ಅಡಗಿದ್ದು, ಅವುಗಳನ್ನು ಹೊರತೆಗೆಯಬೇಕು. ಸಂಸ್ಕೃತ ಭಾಷೆಯನ್ನು ಸೀಮಿತಗೊಳಿಸುವ ಬದಲು ಅದನ್ನು ವಿಸ್ತರಿಸುವ ಕೆಲಸವಾಗಬೇಕು. ಸಂಸ್ಕೃತದ ಬಗ್ಗೆ ಮಾತನಾಡುವ ಬದಲು ಸಂಸ್ಕೃತಕ್ಕಾಗಿ ಕೆಲಸಮಾಡಬೇಕು ಎಂದರು.

ಇಂದಿನ ಸ್ಥಿತಿಯಲ್ಲಿ ಭಾರತಕ್ಕೆ ಸಂಸ್ಕೃತದ ಅಗತ್ಯವಿದೆ. ಅದು ಕೇವಲ ಭಾಷೆಯಲ್ಲ, ಅದೊಂದು ವೈಜ್ಞಾನಿಕ ಭಾಷೆ. ಇದರಲ್ಲಿ ತಂತ್ರಜ್ಞಾನ, ವಿಜ್ಞಾನ, ವೇದ, ಉಪನಿಷತ್, ಗೀತೆ ಎಲ್ಲವೂ ಇದೆ. ಈ ದೇಶದ ಸಂಸ್ಕೃತಿ ಸಂಸ್ಕೃತದಲ್ಲಿದೆ. ಅದನ್ನು ತಿಳಿಯದೇ ನಾವು ಭಾರತವನ್ನು ಅರಿಯಲು ಸಾಧ್ಯವಿಲ್ಲ ಎಂದು ಸುಮಿತ್ರಾ ಮಹಾಜನ್ ಹೇಳಿದರು. ಇದೇ ಸಂದರ್ಭದಲ್ಲಿ ಅವರು ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕರಾದ ಗುರೂಜಿ ಅವರ ಕುರಿತ ಪುಸ್ತಕದ ಸಂಸ್ಕೃತ ಅನುವಾದವನ್ನು ಬಿಡುಗಡೆಗೊಳಿಸಿದರು.

ಆಶೀರ್ವಚನ ನೀಡಿದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಮಾತನಾಡಿ, ಸಂಸ್ಕೃತ ಕೇವಲ ದೇವರ ಭಾಷೆಯಲ್ಲ, ಅದು ಭಾರತೀಯರೆಲ್ಲರ ಮಾತೃಭಾಷೆಯಾಗಿದೆ ಎಂದರು. ದೇಶದ ಎಲ್ಲಾ ಭಾಷೆಗಳು ಪರಿಮಿತಯೊಳಗಿ ದ್ದರೆ,ಸಂಸ್ಕೃತ ಮಾತ್ರ ಇಡೀ ದೇಶದ,ಎಲ್ಲಾ ರಾಜ್ಯಗಳಲ್ಲೂ ಕಂಡುಬರುತ್ತಿದೆ ಎಂದವರು ನುಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಸಂಸ್ಕೃತ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಭಾಷೆ. ಈ ಭಾಷೆಯ ಅಧ್ಯಯನಕ್ಕೆ ಅನಾದಾರ ಸರಿಯಲ್ಲ. ಸಂಸ್ಕೃತ ಭಾಷೆಯ ಕಲಿಕೆಗೆ ಅವಕಾಶ ಕಲ್ಪಿಸಬೇಕು. ಇನ್ನು ಮುಂದೆ ಎನ್ನೆಸ್ಸೆಸ್ ಶಿಬಿರಗಳಲ್ಲಿ ಸುಭಾಷಿತಗಳ ಕಲಿಕೆಗೆ ವ್ಯವಸ್ಥೆ ಮಾಡುವುದಾಗಿ ನುಡಿದರು.

ಸಂಸ್ಕೃತ ಭಾರತಿಯ ಅಖಿಲ ಭಾರತ ಅಧ್ಯಕ್ಷ ಡಾ.ಚಾಂದ ಕಿರಣ್ ಸಲೂಜಾ, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಅವರು ಸಮಾವೇಶ ವನ್ನುದ್ದೇಶಿಸಿ ಮಾತನಾಡಿದರು. ಸಂಸದೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.

ಅಖಿಲ ಭಾರತ ಸಂಸ್ಕೃತ ಭಾರತಿಯ ಸಂಪರ್ಕ ಪ್ರಮುಖ ಸತ್ಯನಾರಾಯಣ ಭಟ್ಟ ಅತಿಥಿಗಳನ್ನು ಸ್ವಾಗತಿಸಿದರೆ, ಅಖಿಲ ಭಾರತ ಮಹಾಮಂತ್ರಿ ನಂದಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಕೃತ ಭಾರತಿಯ ಪ್ರಾಂತ ಅಧ್ಯಕ್ಷ ಡಾ.ಶ್ರೀನಿವಾಸ ವರಖೇಡಿ ಕಾರ್ಯಕ್ರಮ ನಿರೂಪಿಸಿದರೆ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುರಾಣಿಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News