ಬಹುಭಾಷಾ ಸಂವೇದನೆ, ಅಧ್ಯಾತ್ಮದ ತಳಹದಿ ಶಿಕ್ಷಣಕ್ಕೆ ಸ್ಫೂರ್ತಿಯಾಗಲಿ: ಜಯಂತ ಕಾಯ್ಕಿಣಿ

Update: 2017-01-06 18:32 GMT

ಮಂಜೇಶ್ವರ, ಜ.6: ಒಂದು ಊರಿನ ಶ್ರೀಮಂತ ಹಾಗೂ ಬಡವನ ಮಕ್ಕಳು ಒಂದೇ ಶಾಲೆಯಲ್ಲಿ ಅಕ್ಕಪಕ್ಕ ಕುಳಿತು ಒಟ್ಟಿಗೆ ಕಲಿಯುವುದು ಶಿಕ್ಷಣ. ಇಂದು ಶಿಕ್ಷಣದ ಧ್ಯೇಯಗಳು ಬದಲಾಗುತ್ತಿದ್ದು, ಬಹುಭಾಷಾ ಸಂವೇದನೆ ಇಲ್ಲವಾಗುತ್ತಿದೆ. ವಿದ್ಯಾರ್ಥಿಗಳು ಭಾಷೆಯ ವಿಷಯದಲ್ಲಿ ಸೀಮಿತರಾಗದೆ ಹಲವು ಭಾಷೆ ವಿಷಯಗಳನ್ನು ತಮ್ಮದಾಗಿಸಿಕೊಳ್ಳಬೇಕಿದೆ ಎಂದು ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.

ಮೀಯಪದವು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ವರ್ಷಾಚರಣೆಯ ಸಭಾಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಅಧ್ಯಾತ್ಮವು ವ್ಯಾಪಾರ ವಸ್ತುವಾಗುತ್ತಿದೆ. ಆದರೆ ಅಧ್ಯಾತ್ಮ ಬದುಕಿನ ಓರೆ ಕೋರೆಗಳನ್ನು ಅರ್ಥೈಸಿ ಮುನ್ನಡೆಯುವುದಾಗಿದೆ. ಅಧ್ಯಾತ್ಮದ ತಳಹದಿಯನ್ನು ರೂಪಿಸುವವರು ಶಿಕ್ಷಕರು. ಇಂತಹ ಶಿಕ್ಷಕರು, ಕವಿಗಳು, ಸಾಹಿತಿಗಳು ಯಾವುದೇ ರಾಜಕೀಯ ಪಕ್ಷದ ನಿಲುವನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಲೇಖಕಿ ವೈದೇಹಿ ಮಾತನಾಡಿ, ಗ್ರಾಮೀಣ ಪ್ರದೇಶದ ಶಾಲೆ ದೇಶದ ಉತ್ತಮ ಶಾಲೆಗಳಾಗಿ ಬೆಳೆಯುತ್ತಿವೆ. ಮಕ್ಕಳು ದೇಶದ ಮಹಾನ್ ವ್ಯಕ್ತಿಗಳ ಆತ್ಮಚರಿತ್ರೆಗಳನ್ನು ಓದಬೇಕು, ಆ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಬೇಕು ಎಂದು ಸಲಹೆಯಿತ್ತರು. ಮಂಜೇಶ್ವರ ಬ್ಲಾಕ್ ಪಂ.ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News