×
Ad

80% ರೈತರ ಆತ್ಮಹತ್ಯೆಗೆ ಬ್ಯಾಂಕ್ ಸಾಲವೇ ವಿಲನ್, ಖಾಸಗಿ ಲೇವಾದೇವಿಗಾರರಲ್ಲ!

Update: 2017-01-07 09:25 IST

ಹೊಸದಿಲ್ಲಿ, ಜ.7: ಸಾಲಬಾಧೆಯಿಂದ ರೈತರು ಮಾಡಿಕೊಳ್ಳುವ ಆತ್ಮಹತ್ಯೆಗಳಿಗೆ ಸಾಮಾನ್ಯವಾಗಿ ಲೇವಾದೇವಿಗಾರರನ್ನು ಬೊಟ್ಟು ಮಾಡಲಾಗುತ್ತದೆ. ಆದರೆ ಸರ್ಕಾರಿ ಅಂಕಿ-ಅಂಶ ಭಿನ್ನ ಚಿತ್ರಣವನ್ನು ತೆರೆದಿಟ್ಟಿದೆ.

2015ರಲ್ಲಿ ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡ ಶೇಕಡ 80ರಷ್ಟು ರೈತರು ಬ್ಯಾಂಕ್ ಅಥವಾ ನೋಂದಾಯಿತ ಮೈಕ್ರೊಫೈನಾನ್ಸ್ ಸಂಸ್ಥೆಗಳಿಂದ ಪಡೆದ ಸಾಲದ ಹೊರೆಯಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆಘಾತಕಾರಿ ಅಂಕಿ ಅಂಶ ಇದೀಗ ಬಹಿರಂಗವಾಗಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ ಇತ್ತೀಚಿನ ರೈತರ ಆತ್ಮಹತ್ಯೆ ಅಂಕಿ-ಅಂಶಗಳ ಪ್ರಕಾರ, ಸಾಲದ ಹೊರೆಯಿಂದಾಗಿ ದೇಶದಲ್ಲಿ 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡ 3,000 ರೈತರ ಪೈಕಿ, 2,474 ಮಂದಿ ಬ್ಯಾಂಕ್ ಹಾಗೂ ಮೈಕ್ರೊಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದಿದ್ದರು. ಎನ್‌ಸಿಆರ್‌ಬಿ ಇದೇ ಮೊಟ್ಟಮೊದಲ ಬಾರಿಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಾಲದ ಮೂಲವನ್ನು ವಿಶ್ಲೇಷಿಸಿದೆ.

ಬ್ಯಾಂಕ್ ಹಾಗೂ ಲೇವಾದೇವಿಗಾರರಿಂದ ಸಾಲ ಪಡೆದು ಆತ್ಮಹತ್ಯೆ ಮಾಡಿಕೊಂಡ ರೈತರ ಪ್ರಮಾಣ, ಕೇವಲ ಶೇಕಡ 10. ಕೇವಲ ಲೇವಾದೇವಿಗಾರರಿಂದಷ್ಟೇ ಹಣ ಸಾಲ ಪಡೆದು ಆತ್ಮಹತ್ಯೆ ಮಾಡಿಕೊಂಡ ರೈತರು ಶೇಕಡ 9.8ರಷ್ಟು.

2014ಕ್ಕೆ ಹೋಲಿಸಿದರೆ 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆಯಲ್ಲಿ ಶೇಕಡ 41.7ರಷ್ಟು ಹೆಚ್ಚಳವಾಗಿದೆ. 2014ರಲ್ಲಿ ವಿವಿಧ ಕಾರಣಗಳಿಗಾಗಿ 5,650 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2015ರಲ್ಲಿ 8,007 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News