ವಾಜಪೇಯಿಯನ್ನು ಕೆಳಗಿಳಿಸಿ ಅಡ್ವಾಣಿಯನ್ನು ಪ್ರಧಾನಿ ಮಾಡಲು ನಡೆದಿತ್ತು ಸಂಚು !

Update: 2017-01-07 07:05 GMT

ಹೊಸದಿಲ್ಲಿ,ಜ.7 :2002ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರನ್ನು ಕೆಳಗಿಳಿಸಿ ಅವರ ಸ್ಥಾನಕ್ಕೆ ಇನ್ನೊಬ್ಬ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯವರನ್ನು ತರುವ ಸಂಚೊಂದು ನಡೆದಿತ್ತೆಂದು ತಿಳಿದು ಬಂದಿದೆ. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಉಲ್ಲೇಖ್ ಎನ್ ಪಿ ಅವರು ಪೆಂಗ್ವಿನ್ ಪಬ್ಲಿಕೇಶನ್ಸ್ ಪ್ರಕಾಶಿಸಿರುವ ತಮ್ಮ ಕೃತಿ‘ದಿ ಅನ್ ಟೋಲ್ಡ್ ವಾಜಪೇಯಿ :ಪೊಲಿಟಿಷಿಯನ್ ಎಂಡ್ ಪ್ಯಾರಡಾಕ್ಸ್’ ಇದರಲ್ಲಿ ಮೇಲಿನ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ಈ ಕೃತಿಯಲ್ಲಿ ಬರೆದಿರುವಂತೆ 2002ರಲ್ಲಿ ಅಡ್ವಾಣಿ ಉಪ ಪ್ರಧಾನಿಯಾಗಿದ್ದ ಹೊರತಾಗಿಯೂ ವಾಜಪೇಯಿಯವರನ್ನು ಸ್ಥಾನಪಲ್ಲಟಗೊಳಿಸಲು ಪ್ರಯತ್ನಗಳು ಆರಂಭವಾಗಿದ್ದವು.‘‘ಈ ಸಂಚಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಂತೆ ಕೇಂದ್ರ ಸಚಿವರೊಬ್ಬರು ವಾಜಪೇಯಿಯವರಿಗೆ ಹೇಳಿದ್ದರು’’ ಎಂದೂ ಪುಸ್ತಕದಲ್ಲಿ ಉಲ್ಲೇಖಗೊಂಡಿದೆ.

‘‘ಇದಕ್ಕೆ ಉತ್ತರವಾಗಿ ವಾಜಪೇಯಿಯವರು ತಮ್ಮ ಸ್ಥಾನದಲ್ಲಿ ಅಡ್ವಾಣಿಯವರನ್ನು ಕೂರಿಸುವ ಸಂಚಿನ ಬಗ್ಗೆ ತಮಗೆ ತಿಳಿದಿರುವುದಾಗಿಯೂ ಆದರೆ ಇದರ ಹಿಂದೆ ಯಾರೆಲ್ಲಾ ಇದ್ದಾರೆಂಬುದು ಸ್ಪಷ್ಟವಾಗಿ ತಿಳಿದಿಲ್ಲವೆಂದೂ ಹೇಳಿದ್ದರು,’’ ಎಂದು ಕೃತಿಯಲ್ಲಿ ಬರೆಯಲಾಗಿದೆ. ಅಡ್ವಾಣಿಗೆ ಪ್ರಧಾನಿ ಹುದ್ದೆ ನೀಡಿ ಸ್ವತಹ ರಾಷ್ಟ್ರಪತಿಯಾಗುವಂತೆ ಆರೆಸ್ಸೆಸ್ಸಿನ ಹಿರಿಯ ನಾಯಕರೊಬ್ಬರು ವಾಜಪೇಯಿಗೆ ಹೇಳಿದ್ದರೆಂದು ಕೃತಿಯಲ್ಲಿ ಹೇಳಲಾಗಿದೆ.

1975-77ರ ನಡುವೆ ತುರ್ತುಪರಿಸ್ಥಿತಿಯ ಸಂದರ್ಭ ಸಾರ್ವಜನಿಕ ಆಸ್ತಿಪಾಸ್ತಿಗಳಿಗಾದ ನಷ್ಟಕ್ಕೆ ಹೊಣೆ ಹೊತ್ತುಕೊಳ್ಳುವಂತೆ ವಾಜಪೇಯಿಯವರು ಎಬಿವಿಪಿ ಕಾರ್ಯಕರ್ತರಲ್ಲಿ ಹೇಳುವ ಮೂಲಕ ಸಂಧಾನದ ಒಂದು ಯೋಜನೆ ಸಿದ್ಧಪಡಿಸಿದ್ದರೆಂದೂ ಕೃತಿಯಲ್ಲಿ ವಿವರಿಸಲಾಗಿದೆ.

ಈ ಕೃತಿಯ ಲೇಖಕ ಉಲ್ಲೇಖ್ ಅವರು ಖ್ಯಾತ ಪತ್ರಿಕೆ ಓಪನ್ ಇದರಕಾರ್ಯಕಾರಿ ನಿರ್ದೇಶಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News