‘ದೃಶ್ಯಂ’ ಚಿತ್ರದ ಸ್ಫೂರ್ತಿ:ಅಪ್ಪ-ಮಗನಿಂದ ವ್ಯಕ್ತಿಯ ಹತ್ಯೆ

Update: 2017-01-07 09:56 GMT

ಪುಣೆ,ಜ.7: ಕಳೆದ ವರ್ಷದ ಸೆ.27ರಿಂದ ನಾಪತ್ತೆಯಾಗಿದ್ದ ಚಿಖ್ಲಿಯ ಲೇವಾದೇವಿ ಗಾರನೋರ್ವನ ಹತ್ಯೆಗೆ ಸಂಬಂಧಿಸಿದಂತೆ ಗುಜರಿ ವ್ಯಾಪಾರಿ ಮತ್ತು ಆತನ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಲೇವಾದೇವಿಗಾರ ಶ್ರೀರಾಮ ಶಿವಾಜಿ ವಾಲೇಕರ್ ಎಂಬಾತನನ್ನು ಕೊಂದು ಚಿಖ್ಲಿಯಲ್ಲಿ ತಾವು ಬಾಡಿಗೆಗೆ ಪಡೆದುಕೊಂಡಿದ್ದ ಜಾಗದಲ್ಲಿ ಶವವನ್ನು ಹೂತು ಹಾಕಿದ್ದು ನಿನ್ನೆ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳಾದ ಕುಡಾಲ್‌ವಾಡಿ ನಿವಾಸಿಗಳಾದ ಸಮೀದುಲ್ಲಾ ಮಣಿಯಾರ್(56) ಮತ್ತು ಆತನ ಮಗ ಮೆಹಬೂಬ್ ಮಣಿಯಾರ್(26) ಶವವನ್ನು ವಿಲೇವಾರಿ ಮಾಡಲು ಬಾಲಿವುಡ್ ಕ್ರೈಂ ಥ್ರಿಲ್ಲರ್ ‘ದೃಶ್ಯಂ’ ನಿಂದ ತಮಗೆ ಸ್ಫೂರ್ತಿ ಸಿಕ್ಕಿತ್ತು ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

 ಚಿತ್ರದಲ್ಲಿದ್ದಂತೆ ಈ ಅಪ್ಪ-ಮಗ ಏನೂ ಆಗಿಯೇ ಇಲ್ಲವೆಂಬಂತೆ ಬಿಂಬಿಸಲು ಎಲ್ಲ ಸಾಕ್ಯಾಧಾರಗಳನ್ನು ನಾಶ ಮಾಡಲು ಪ್ರಯತ್ನಿಸಿದ್ದರು. ಆದರೆ ಅವರ ಅದೃಷ್ಟ ಚೆನ್ನಾಗಿರಲಿಲ್ಲ. ತಾವೆಂದೂ ಸಿಕ್ಕಿಬೀಳುವುದಿಲ್ಲ ಎಂದು ಭಾವಿಸಿದ್ದ ಇಬ್ಬರೂ ಈಗ ಲಾಕಪ್‌ನಲ್ಲಿ ಕೊಳೆಯುತ್ತಿದ್ದಾರೆ.

ತನ್ನಿಂದ ಪಡೆದುಕೊಂಡಿದ್ದ ಸಾಲವನ್ನು ಮರಳಿಸುವಂತೆ ವಾಲೇಕರ್ ತಮ್ಮ ಹಿಂದೆ ಬಿದ್ದಿದ್ದರಿಂದ ಆರೋಪಿಗಳು ಆತನ ಕಥೆಯನ್ನು ಮುಗಿಸಲು ಸಂಚು ರೂಪಿಸಿದ್ದರು ಎಂದು ನಿಗ್ದಿ ಪೊಲೀಸ್ ಠಾಣೆಯ ಅಧಿಕಾರಿ ದೇವೇಂದ್ರ ಚವಾಣ್ ತಿಳಿಸಿದರು.

ಸೆ.27ರಂದು ವಾಲೇಕರ್‌ನ ಕತ್ತು ಸೀಳಿ ಹತ್ಯೆಗೈದಿದ್ದ ಈ ಜೋಡಿ ಬಳಿಕ ಶವವನ್ನು ತಮ್ಮ ಗುಜರಿ ಗೋದಾಮಿನ ಬಳಿಯ ಜಾಗದಲ್ಲಿ ಹೂತು ಹಾಕಿದ್ದರು. ಸಂಪೂರ್ಣ ಕೊಳೆತಿದ್ದ ಶವವನ್ನು ನಿನ್ನೆ ಹೊರತೆಗೆಯಲಾಗಿದೆ.

ಸೆ.27ರ ಬೆಳಿಗ್ಗೆಯಿಂದ ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ವಾಲೇಕರನ ತಂದೆ ನಿಗ್ದಿ ಠಾಣೆಯಲ್ಲಿ ಸೆ.28ರಂದು ದೂರು ದಾಖಲಿಸಿದ್ದರು.

ತನಿಖೆಯ ಸಂದರ್ಭ ಸಮೀದುಲ್ಲಾ ಮತ್ತು ಮೆಹಬೂಬ್ ಹಲವಾರು ಬಾರಿ ವಾಲೇಕರ್‌ನಿಂದ ಸಾಲ ಪಡೆದುಕೊಂಡಿದ್ದರು ಎನ್ನುವುದು ತಿಳಿದುಬಂದಿತ್ತು. ಸಾಲದ ವಿಷಯದಲ್ಲಿ ಅವರು ವಾಲೇಕರ್‌ನೊಂದಿಗೆ ವಿವಾದವನ್ನು ಹೊಂದಿದ್ದರು ಎಂಬ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿತ್ತು.

ವಾಲೇಕರ್ ಮತ್ತು ಸಮೀದುಲ್ಲಾರ ಮೊಬೈಲ್ ಕರೆ ವಿವರಗಳನ್ನು ಜಾಲಾಡಿದಾಗ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಅವರು ಹಲವಾರು ಬಾರಿ ಪರಸ್ಪರ ಮಾತನಾಡಿದ್ದು ಬೆಳಕಿಗೆ ಬಂದಿತ್ತು.

ತನ್ಮಧ್ಯೆ ಸಮೀದುಲ್ಲಾ ಮಗನೊಂದಿಗೆ ತನ್ನೂರಿಗೆ ತೆರಳಿದ್ದ. ಗುರುವಾರ ಕುಡಾಲ್‌ವಾಡಿಗೆ ಮರಳಿದ ಮೆಹಬೂಬ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ವಾಲೇಕರ್‌ನನ್ನು ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಇದರ ಬೆನ್ನಿಗೇ ಸಮೀದುಲ್ಲಾ ಕೂಡ ಬಂಧಿತನಾಗಿದ್ದಾನೆ. ಆರೋಪಿಗಳು ಶವವನ್ನು ಹೂತು ಹಾಕಿದ್ದ ಜಾಗವನ್ನೂ ತೋರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News