ಆಗಸ್ಟ ವೆಸ್ಟ್‌ಲ್ಯಾಂಡ್ ಪ್ರಕರಣ : ದಲ್ಲಾಳಿ ಮಿಶೆಲ್ ವಿರುದ್ಧಜಾಮೀನು ರಹಿತ ವಾರಂಟ್ ಜಾರಿ
ಹೊಸದಿಲ್ಲಿ, ಜ.7: 3,600 ಕೋಟಿ ಮೊತ್ತದ ಆಗಸ್ಟ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ವ್ಯವಹಾರದಲ್ಲಿ ಅವ್ಯವಹಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ಕೋರ್ಟ್ ಇಂದಿಲ್ಲಿ ಬ್ರಿಟಿಷ್ ಪ್ರಜೆ ಮತ್ತು ಪ್ರಕರಣದಲ್ಲಿ ದಲ್ಲಾಳಿ ಪಾತ್ರ ವಹಿಸಿದ್ದರು ಎನ್ನಲಾದ ಕ್ರಿಶ್ಚಿಯನ್ ಮಿಶೆಲ್ ಜೇಮ್ಸ್‌ಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ. ಅಲ್ಲದೆ ಮೂವರು ಆರೋಪಿಗಳಿಗೆ ಹೊಸದಾಗಿ ವಾರಂಟ್ ಜಾರಿಗೊಳಿಸಿದೆ. ಭಾರತ ಮೂಲದ ಮೀಡಿಯಾ ಎಕ್ಸಿಂ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಮತ್ತು ಇದರ ನಿರ್ದೇಶಕರಾದ ಅರ್.ಕೆ.ನಂದ ಮತ್ತು ಜೆ.ಬಿ.ಸುಬ್ರಮಣಿಯಮ್ ಅವರಿಗೆ ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ವಾರಂಟ್ ಮರು ಜಾರಿಗೊಳಿಸಿ, ಫೆ.22ರಂದು ಕೋರ್ಟ್ ಎದುರು ಹಾಜರಾಗುವಂತೆ ಸೂಚಿಸಿದ್ದಾರೆ.
ನ.31ರಂದು ನಡೆದ ವಿಚಾರಣೆ ಸಂದರ್ಭ ಮೂವರು ಆರೋಪಿಗಳಿಗೆ ಜಾರಿಗೊಳಿಸಲಾದ ವಾರಂಟ್ ಅನ್ನು ಆರೋಪಿಗಳಿಗೆ ತಲುಪಿಸಲು ಸಾಧ್ಯವಾಗಿಲ್ಲ ಎಂದು ಜಾರಿ ನಿರ್ದೇಶನಾಲಯದ ಪರ ವಕೀಲ ಎನ್.ಕೆ.ಮಠ ನ್ಯಾಯಾಲಯಕ್ಕೆ ತಿಳಿಸಿದರು.ಅಲ್ಲದೆ ಜೇಮ್ಸ್ ಮಿಶೆಲ್ ಭಾರತದಿಂದ ಹೊರಗೆ ನೆಲೆಸಿದ್ದು ಆತನನ್ನು ಭಾರತಕ್ಕೆ ಕರೆತಂದು ವಿಚಾರಣೆ ಎದುರಿಸುವಂತಾಗಲು ಜಾಮೀನುರಹಿತ ವಾರಂಟ್ ಜಾರಿಗೊಳಿಸಬೇಕೆಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಮೇಲಿನ ಆದೇಶ ಜಾರಿಗೊಳಿಸಿತು.