ಧೋನಿ ನನಗೆ ಹಲವು ಬಾರಿ ಅವಕಾಶ ನೀಡಿದ್ದರು: ಕೊಹ್ಲಿ ಶ್ಲಾಘನೆ

Update: 2017-01-07 18:21 GMT

ಹೊಸದಿಲ್ಲಿ, ಜ.7: ಮಹೇಂದ್ರ ಸಿಂಗ್ ಧೋನಿ ಕೇವಲ ಶ್ರೇಷ್ಠ ನಾಯಕ ಮಾತ್ರವಲ್ಲ ನನಗೆ ಹಲವು ಬಾರಿ ಭಾರತೀಯ ತಂಡದಲ್ಲಿ ಸ್ಥಾನ ಕಳೆದುಕೊಳ್ಳದಂತೆ ನೋಡಿಕೊಂಡಿದ್ದಾರೆ ಎಂದು ಧೋನಿಯ ಉತ್ತರಾಧಿಕಾರಿ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.

ಕೊಹ್ಲಿ 2008ರಲ್ಲಿ ಶ್ರೀಲಂಕಾದಲ್ಲಿ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟ ಬಳಿಕ ಧೋನಿಯ ನಾಯಕತ್ವದಲ್ಲಿ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ್ದಾರೆ. ಕೊಹ್ಲಿ ಆರಂಭಿಕ ದಿನಗಳಲ್ಲಿ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರಲಿಲ್ಲ. ಅವರ ಸ್ಥಾನ ಅಭದ್ರತೆಯಿಂದ ಕೂಡಿತ್ತು. ಆದರೆ, ಧೋನಿ ಅವರು ಕೊಹ್ಲಿಯ ಪ್ರತಿಭೆ ಹಾಗೂ ಸಾಮರ್ಥ್ಯದ ಮೇಲೆ ಅದಮ್ಯ ವಿಶ್ವಾಸ ಇಟ್ಟಿದ್ದರು.

 ‘‘ಅವರು(ಧೋನಿ) ಓರ್ವ ವ್ಯಕ್ತಿಯಾಗಿ ನನಗೆ ಆರಂಭದಲ್ಲಿ ಮಾರ್ಗದರ್ಶನ ನೀಡುತ್ತಿದ್ದರು. ಸಾಕಷ್ಟು ಅವಕಾಶವನ್ನು ನೀಡಿದ್ದರು. ಕ್ರಿಕೆಟಿಗನಾಗಿ ಬೆಳೆಯಲು ಬಹಳಷ್ಟು ಅವಕಾಶವನ್ನು ಕಲ್ಪಿಸಿದ್ದರು. ಹಲವು ಬಾರಿ ತಂಡದಿಂದ ಕೈಬಿಡುವ ಹಂತದಲ್ಲಿದ್ದಾಗ ತನ್ನ ಪರ ನಿಂತಿದ್ದರು’’ ಎಂದು ಬಿಸಿಸಿಐ ಡಾಟ್ ಟಿವಿಯಲ್ಲಿ ಭಾರತದ ಎಲ್ಲ ಮಾದರಿಯ ಕ್ರಿಕೆಟ್ ನಾಯಕ ಕೊಹ್ಲಿ ಹೇಳಿದ್ದಾರೆ.

ಧೋನಿಯಿಂದ ತೆರವಾಗಿರುವ ನಾಯಕನ ಸ್ಥಾನ ತುಂಬುವುದು ಕಠಿಣ ಸವಾಲು ಎಂದು ಭಾರತದ ನಂ.1 ಬ್ಯಾಟ್ಸ್‌ಮನ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

‘‘ಧೋನಿಯಂತಹ ದಕ್ಷ, ಪ್ರತಿಭಾವಂತ ನಾಯಕನ ಸ್ಥಾನ ತುಂಬುವುದು ಸುಲಭಸಾಧ್ಯವಲ್ಲ. ಎಂಎಸ್ ಧೋನಿಯ ಬಗ್ಗೆ ಯೋಚಿಸಿದರೆ ನನ್ನ ಮನಸ್ಸಿನಲ್ಲಿ ಬರುವ ಮೊದಲ ಶಬ್ದ ನಾಯಕ. ಧೋನಿಯನ್ನು ಬೇರೆ ರೀತಿಯಲ್ಲಿ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ. ನನಗೆ ಸದಾಕಾಲ ಅವರೇ ನಾಯಕ’’ ಎಂದು ಕೊಹ್ಲಿ ನುಡಿದರು.

ಬುಧವಾದ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಎಂಎಸ್ ಧೋನಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತನ್ನ ನಾಯಕತ್ವ ಸ್ಥಾನವನ್ನು ತ್ಯಜಿಸಿದ್ದರು. ಈಗಾಗಲೇ ಟೆಸ್ಟ್ ಕ್ರಿಕೆಟ್‌ನ ನಾಯಕನಾಗಿ ಕಾರ್ಯನಿರ್ವಹಿಸುತ್ತಿರುವ ಕೊಹ್ಲಿಗೆ ಆಯ್ಕೆ ಸಮಿತಿ ಅಧಿಕೃತವಾಗಿ ಅಧಿಕಾರ ಹಸ್ತಾಂತರಿಸಲು ನಿರ್ಧರಿಸಿತ್ತು.

ಕೊಹ್ಲಿಯ ಹೊಸ ಜವಾಬ್ದಾರಿ ಇಂಗ್ಲೆಂಡ್ ವಿರುದ್ಧ ಜ.15 ರಿಂದ ಆರಂಭವಾಗಲಿರುವ ಆರು ಪಂದ್ಯಗಳ ಸೀಮಿತ ಓವರ್ ಕ್ರಿಕೆಟ್ ಸರಣಿಯ ಮೂಲಕ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News