ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ
ಶಿಲ್ಲಾಂಗ್, ಜ.7: 14ರ ಹರೆಯದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಮೇಘಾಲಯ ರಾಜ್ಯದ ಪಕ್ಷೇತರ ಶಾಸಕ ಜೂಲಿಯಸ್ ಕೆ.ದಾರ್ಫಂಗ್ ಅವರನ್ನು ಅಸ್ಸಾಂನ ಗುವಾಹಟಿಯಲ್ಲಿ ಶುಕ್ರವಾರ ರಾತ್ರಿ ಬಂಧಿಸಲಾಗಿದ್ದು ಶಿಲ್ಲಾಂಗ್‌ಗೆ ಕರೆತರಲಾಗುತ್ತಿದೆ. ತಲೆಮರೆಸಿಕೊಂಡಿದ್ದ ಶಾಸಕರ ಪತ್ತೆಗಾಗಿ ಮೇಘಾಲಯ ಪೊಲೀಸರು ಲುಕ್‌ಔಟ್ ನೊಟೀಸ್ ಜಾರಿಗೊಳಿಸಿದ್ದರು. ಅಲ್ಲದೆ ಹಲವಾರು ಪ್ರದೇಶಗಳಲ್ಲಿ ದಾಳಿ ನಡೆಸಿ ಶಾಸಕರನ್ನು ಪತ್ತೆಹಚ್ಚುವ ಪ್ರಯತ್ನ ನಡೆಸಲಾಗಿತ್ತು. ಉಗ್ರಗಾಮಿ ಸಂಘಟನೆಯೊಂದನ್ನು ಹುಟ್ಟುಹಾಕಿದ್ದ ದಾರ್ಫಂಗ್, 2007ರಲ್ಲಿ ಶರಣಾಗತರಾಗಿದ್ದರು. ಇದೀಗ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 386(ಎ) ಮತ್ತು ಸೆಕ್ಷನ್ 3(ಎ)/4 ರಡಿ ಆರೋಪ ಹೊರಿಸಲಾಗಿದೆ. ದಾರ್ಫಂಗ್‌ಗೆ ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮೇಘಾಲಯದ ಗೃಹ ಸಚಿವ ಎಚ್.ಡಿ.ಆರ್. ಲಿಂಗ್ಡೋ ಅವರ ಪುತ್ರ ಪರಿಚಯಿಸಿಕೊಟ್ಟಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಕಳೆದ ತಿಂಗಳು ಬಂಧಿಸಲಾಗಿತ್ತು.