×
Ad

ಸಾಕ್ಷಿ ಮಹಾರಾಜ್ ವಿರುದ್ಧ ಎಫ್‌ಐಆರ್ ದಾಖಲು

Update: 2017-01-07 23:59 IST

ಹೊಸದಿಲ್ಲಿ, ಜ.7: ಜನಸಂಖ್ಯಾ ಸ್ಫೋಟದ ವಿಷಯದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಸಾಕ್ಷಿ ಮಹಾರಾಜ್ ವಿರುದ್ಧ ಮೀರತ್ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಮುಸ್ಲಿಮರನ್ನು ಹೆಸರಿಸದೆ ಇವರು ನೀಡಿದ್ದ ಹೇಳಿಕೆಯಲ್ಲಿ, ನಾಲ್ಕು ಬಾರಿ ಮದುವೆಯಾಗುವ ಹಕ್ಕು ಹೊಂದಿರುವ ಮತ್ತು 40 ಮಕ್ಕಳಿರುವವರು ಈ ದೇಶದ ಜನಸಂಖ್ಯಾ ಸ್ಫೋಟದ ಸಮಸ್ಯೆಗೆ ಕಾರಣೀಭೂತರು ಎಂದು ವ್ಯಾಖ್ಯಾನಿಸಲಾಗಿತ್ತು. ಈ ದೇಶದಲ್ಲಿ ಜನಸಂಖ್ಯೆ ಸ್ಫೋಟಕ್ಕೆ ಹಿಂದೂಗಳು ಖಂಡಿತಾ ಕಾರಣವಲ್ಲ. ನಾಲ್ಕು ಪತ್ನಿಯರನ್ನು ಹೊಂದಿದ್ದು 40 ಮಕ್ಕಳನ್ನು ಹುಟ್ಟಿಸುವವರು ಇದಕ್ಕೆ ಹೊಣೆಗಾರರು. ಹಿಂದೂಗಳ ಸಂಖ್ಯೆ ಕಡಿಮೆಯಾದರೆ ದೇಶ ಇಬ್ಬಾಗವಾಗುತ್ತದೆ ಎಂದು ಸಾಕ್ಷಿ ಮಹಾರಾಜ್ ಹೇಳಿಕೆಯಲ್ಲಿ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 298(ಇತರ ವ್ಯಕ್ತಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಮಾತನಾಡುವುದು) ಮತ್ತು 295 ಎ(ಯಾವುದೇ ವರ್ಗದವರ ಧಾರ್ಮಿಕ ಭಾವನೆಗಳನ್ನು ಅವಮಾನಗೊಳಿಸುವ ರೀತಿಯಲ್ಲಿ ವರ್ತಿಸುವುದು) ಅಡಿ ಪ್ರಕರಣ ದಾಖಲಾಗಿದೆ. ಈ ಮಧ್ಯೆ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಮಹಾರಾಜ್, ಮಹಿಳೆ ಒಂದು ಹೆರುವ ಯಂತ್ರ ಆಗಬಾರದು. ನಾಲ್ಕು ಪತ್ನಿಯರು, ಮೂರು ಡೈವೋರ್ಸ್, ನಲ್ವತ್ತು ಮಕ್ಕಳು.. ಇದೆಲ್ಲಾ ಸ್ವೀಕಾರಾರ್ಹವಲ್ಲ ಎಂಬುದಷ್ಟೇ ತನ್ನ ಹೇಳಿಕೆಯ ಅರ್ಥವಾಗಿದೆ ಎಂದಿದ್ದಾರೆ.
ಸಾಕ್ಷಿ ಮಹಾರಾಜ್ ವಿಭಾಗಿಸುವ ರಾಜಕೀಯ ಆಟ ಆಡುತ್ತಿದ್ದಾರೆ ಎಂದು ಆರೋಪಿಸಿರುವ ಬಿಎಸ್‌ಪಿ, ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. ಈ ಮಧ್ಯೆ ಸಾಕ್ಷಿ ಮಹಾರಾಜ್ ಹೇಳಿಕೆಯ ಬಗ್ಗೆ ವರದಿ ನೀಡುವಂತೆ ಚುನಾವಣಾ ಆಯೋಗವು ಮೀರತ್ ಜಿಲ್ಲಾಡಳಿತಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News