ಇಂದು ‘ರಂಗ ಕಲಾನಿ’ ಪ್ರಶಸ್ತಿ ಪ್ರದಾನ

Update: 2017-01-07 18:42 GMT

ಉಡುಪಿ, ಜ.7: ಉಡುಪಿಯ ಸಾಂಸ್ಕೃತಿಕ ಸಂಘಟನೆ ರಂಗಭೂಮಿ ಇತ್ತೀಚೆಗೆ ನಡೆಸಿದ 37ನೆ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಜ.8ರಂದು ಸಂಜೆ 5:45ಕ್ಕೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ ಎಂದು ರಂಗಭೂಮಿಯ ಉಪಾಧ್ಯಕ್ಷ ಪಿ.ವಾಸುದೇವ ರಾವ್ ತಿಳಿಸಿದ್ದಾರೆ.

ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದು, ರಂಗಭೂಮಿ ವತಿಯಿಂದ ನೀಡಲಾಗುವ ‘ರಂಗ ಕಲಾನಿ’ ಪ್ರಶಸ್ತಿಯನ್ನು ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಅವರಿಗೆ ಪ್ರದಾನ ಮಾಡಲಿದ್ದಾರೆ ಎಂದರು.

ಇದೇ ಸಂದರ್ಭ ‘ಕಲಾಂಜಲಿ’ ಸ್ಮರಣ ಸಂಚಿಕೆಯು ಬಿಡುಗಡೆಗೊಳ್ಳಲಿದೆ.

ಸಮಾರಂಭದ ಬಳಿಕ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಬೆಂಗಳೂರು ದೃಶ್ಯ-ಕಾವ್ಯ ತಂಡದ ‘ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ’ ನಾಟಕದ ಮರು ಪ್ರದರ್ಶನವಿರುತ್ತದೆ ಎಂದು ಅವರು ಹೇಳಿದರು.

ಅಂಬಲಪಾಡಿ ನಾಟಕೋತ್ಸವ: ರಂಗಭೂಮಿ ಸಂಸ್ಥೆಯು ನಿ.ಬೀ. ಅಣ್ಣಾಜಿ ಬಲ್ಲಾಳ್ ಸ್ಮರಣಾರ್ಥ ಜ.14ರಿಂದ 16ರವರೆಗೆ ಅಂಬಲಪಾಡಿ ದೇವಸ್ಥಾನದ ಬಯಲು ರಂಗಮಂಟಪದಲ್ಲಿ ಅಂಬಲಪಾಡಿ ನಾಟಕೋತ್ಸವವನ್ನು ಆಯೋಜಿಸಲಿದೆ ಎಂದವರು ತಿಳಿಸಿದರು. ಈ ನಾಟಕೋತ್ಸವದಲ್ಲಿ ಜ.14ರಂದು ರಂಗಭೂಮಿಯ ‘ರೂಪರೂಪಗಳನು ದಾಟಿ’, 15ರಂದು ನೀನಾಸಂನ ‘ಕಾಲಂದುಗೆಯ ಕಥೆ’ ಹಾಗೂ 16 ರಂದು ‘ಅತ್ತ ದರಿ ಇತ್ತ ಪುಲಿ’ ನಾಟಕ ಪ್ರದರ್ಶ ನಗೊಳ್ಳಲಿದೆ. ಪ್ರತಿದಿನ ಸಂಜೆ 6:30ಕ್ಕೆ ಪ್ರದರ್ಶನಗೊಳ್ಳಲಿದೆ. ನಾಟಕೋತ್ಸವನ್ನು ಜ.14ರಂದು ಸಂಜೆ 6:30ಕ್ಕೆ ಮನೋವೈದ್ಯ ಡಾ. ಪಿ.ವಿ.ಭಂಡಾರಿ ಉದ್ಘಾಟಿಸಲಿದ್ದಾರೆ ಎಂದು ವಾಸುದೇವ ರಾವ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮೇಟಿ ಮುದಿಯಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News