'ಅಧಿಕಾರದ ದುರುಪಯೋಗ ಮಾಡಿದ್ದಕ್ಕೆ ನಿಮ್ಮನ್ನು ಯಾಕೆ ಹುದ್ದೆಯಿಂದ ತೆಗೆಯಬಾರದು?
ಹೊಸದಿಲ್ಲಿ, ಜ.8: ಹಿರಿಯ ಕಾಂಗ್ರೆಸ್ ಮುಖಂಡ ವಿ.ಕೆ.ಥಾಮಸ್ ನೇತೃತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ)ಯು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಉರ್ಜಿತ್ ಪಟೇಲ್ ಅವರಿಗೆ ಈ ತಿಂಗಳ 28ರಂದು ಸಮಿತಿ ಮುಂದೆ ಹಾಜರಾಗುವಂತೆ ನಿರ್ದೇಶನ ನೀಡಿದೆ. ನೋಟು ರದ್ದತಿ ಸಂಬಂಧ ತನಿಖಾತ್ಮಕವಾಗಿ ಹತ್ತು ಪ್ರಶ್ನೆಗಳನ್ನು ಸಮಿತಿ ಆರ್‌ಬಿಐ ಗವರ್ನರ್ ಅವರಿಗೆ ನೀಡಿ, ಉತ್ತರಿಸುವಂತೆ ಸೂಚಿಸಿದೆ.
ನೋಟು ರದ್ದತಿ ವಿಚಾರದಲ್ಲಿ ಆರ್‌ಬಿಐ ಪಾಲ್ಗೊಳ್ಳುವಿಕೆ, ಆರ್ಥಿಕತೆ ಮೇಲೆ ಇದರ ಪ್ರಭಾವ, ಆರ್‌ಬಿಐ ನಿಬಂಧನೆಗಳಲ್ಲಿ ಪದೇ ಪದೇ ಬದಲಾವಣೆ ಮತ್ತಿತರ ಅಂಶಗಳನ್ನು ಪ್ರಶ್ನಿಸಲಾಗಿದೆ. ಡಿಸೆಂಬರ್ 30ರಂದು ಈ ಪ್ರಶ್ನಾವಳಿಯನ್ನು ನೀಡಲಾಗಿದೆ.
ಪ್ರಶ್ನಾವಳಿಯಲ್ಲಿ ಒಳಗೊಂಡಿರುವ ಪ್ರಮುಖ ಅಂಶಗಳೆಂದರೆ:
►ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ನೋಟು ರದ್ದತಿ ಆರ್‌ಬಿಐ ಆಡಳಿತ ಮಂಡಳಿಯ ಸಲಹೆ. ಇದಕ್ಕೆ ಅನುಗುಣವಾಗಿ ಸರಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ. ಇದನ್ನು ಸಮರ್ಥಿಸುತ್ತೀರಾ?
►ಇದು ಆರ್‌ಬಿಐ ನಿರ್ಧಾರವಾಗಿದ್ದರೆ, ಯಾವಾಗ ಇದು ದೇಶದ ಹಿತಾಸಕ್ತಿಯಿಂದ ಒಳ್ಳೆಯ ಕ್ರಮ ಎಂಬ ನಿರ್ಧಾರಕ್ಕೆ ಆರ್‌ಬಿಐ ಯಾವಾಗ ಬಂದಿದೆ?
►500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರಾತ್ರೋರಾತ್ರಿ ರದ್ದುಪಡಿಸುವ ಹಿಂದಿನ ತಾರ್ಕಿಕತೆ ಏನು?
►ಆರ್‌ಬಿಐ ಅಂದಾಜಿನಂತೆ ನಕಲಿ ನೋಟು ಪ್ರಮಾಣ ಶೇಕಡ 12 ಆಗಿದ್ದು, ಇತರ ಹಲವು ದೇಶಗಳಿಗೆ ಹೋಲಿಸಿದರೆ ಇದು ಕಡಿಮೆ. ಅಧಿಕ ಮೌಲ್ಯದ ನೋಟುಗಳ ಚಲಾವಣೆ ಪ್ರಮಾಣವೂ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆ. ಹಾಗಿದ್ದೂ ದಿಢೀರನೇ ಈ ನಿರ್ಧಾರ ಕೈಗೊಂಡದ್ದೇಕೆ?
►ನವೆಂಬರ್ 8ರಂದು ದಿಢೀರ್ ಸಭೆ ನಡೆಸಲು ಆರ್‌ಬಿಐ ಆಡಳಿತ ಮಂಡಳಿ ಸದಸ್ಯರಿಗೆ ಯಾವಾಗ ನೋಟಿಸ್ ಕಳುಹಿಸಲಾಗಿತ್ತು?
►ಶೇಕಡ 86ರಷ್ಟು ನೋಟುಗಳನ್ನು ರದ್ದು ಮಾಡಿದರೆ ಅದರಿಂದ ಹೊಸ ನೋಟು ತಯಾರಿಕೆಗೆ ತಗುಲುವ ವೆಚ್ಚ ಹಾಗೂ ಬೇಕಾಗುವ ಅವಧಿಯ ಬಗ್ಗೆ ಸಂಪುಟಕ್ಕೆ ನೀಡಿದ ಟಿಪ್ಪಣಿಯಲ್ಲಿ ವಿವರಗಳಿದ್ದವೇ?
►ಹೊಸ ನೋಟು ಚಲಾವಣೆಗೆ ಬಂದ ಬಳಿಕ ಬ್ಯಾಂಕ್‌ನಿಂದ ಪಡೆಯುವ ಹಣದ ಪ್ರಮಾಣವನ್ನು ಯಾವ ಕಾನೂನಿನಡಿ ನಿರ್ಬಂಧಿಸಲಾಗಿದೆ?
►ಕಳೆದ ಎರಡು ತಿಂಗಳಲ್ಲಿ ಈ ವಿಚಾರದಲ್ಲಿ ಪದೇ ಪದೇ ನೀತಿಗಳು ಬದಲಾಗಿರುವುದೇಕೇ?
►ವಾಸ್ತವವಾಗಿ ಎಷ್ಟು ನೋಟುಗಳನ್ನು ರದ್ದುಪಡಿಸಲಾಗಿತ್ತು ಹಾಗೂ ಎಷ್ಟು ಬ್ಯಾಂಕಿಗೆ ಮರಳಿ ಜಮೆ ಆಗಿದೆ?
►ಈ ಸಂಬಂಧ ಆರ್‌ಟಿಐ ಕಾಯ್ದೆಯಡಿ ಸಲ್ಲಿಸಿದ ಅರ್ಜಿಗಳಿಗೆ ಮಾಹಿತಿ ನೀಡಲು ಆರ್‌ಬಿಐ ಹಿಂಜರಿಯುತ್ತಿರುವುದು ಏಕೆ?
ಶುಕ್ರವಾರ ರಾಜ್ಯಸಭೆಯ ಸ್ಥಾಯಿಸಮಿತಿ ಕೂಡಾ ಪಟೇಲ್ ಹಾಗೂ ಆರ್‌ಬಿಐ ಉಪ ಗವರ್ನರ್‌ಗಳಿಗೆ ಪ್ರಶ್ನೆ ಮುಂದಿಟ್ಟಿದೆ.