ಛತ್ತೀಸ್‌ಗಡ:ಪೊಲೀಸರಿಂದ 16 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ
ರಾಂಚಿ,ಜ.8: ಛತ್ತೀಸ್‌ಗಡದಲ್ಲಿ ಪೊಲೀಸರು ಕನಿಷ್ಠ 16 ಮಹಿಳೆಯರ ಮೇಲೆ ಅತ್ಯಾಚಾರವನ್ನೆಸಗಿದ್ದಾರೆ,ಲೈಂಗಿಕ ಮತ್ತು ದೈಹಿಕ ಹಲ್ಲೆಗಳನ್ನು ನಡೆಸಿದ್ದಾರೆ ಎಂದು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ)ವು ಹೇಳಿದೆ. 2015 ಮತ್ತು 2016ರಲ್ಲಿ ನಡೆದಿರುವ ಈ ಘಟನೆಗಳಿಗೆ ರಾಜ್ಯ ಸರಕಾರವೇ ಹೊಣೆಯಾಗಿದೆ ಎಂದಿರುವ ಅದು, ಸರಕಾರಕ್ಕೆ ನೋಟಿಸ್‌ನ್ನೂ ಜಾರಿಗೊಳಿಸಿದೆ. ಸುಮಾರು 20 ಇತರ ಬಲಿಪಶುಗಳ ಕುರಿತು ದಾಖಲೆಗಳಿಗಾಗಿ ತಾನು ಕಾಯುತ್ತಿರುವುದಾಗಿಯೂ ಆಯೋಗವು ಹೇಳಿದೆ.
ಎನ್‌ಎಚ್‌ಆರ್‌ಸಿ ತಂಡ ಅಥವಾ ಮ್ಯಾಜಿಸ್ಟ್ರೇಟ್ ಹೇಳಿಕೆಗಳನ್ನು ದಾಖಲಿಸಿಕೊಂಡಿರದ ಸಂತ್ರಸ್ತೆಯರ ಹೇಳಿಕೆಗಳನ್ನು ದಾಖಲಿಸಿಕೊಂಡು ಒಂದು ತಿಂಗಳೊಳಗೆ ಅವುಗಳನ್ನು ತನಗೆ ಸಲ್ಲಿಸುವಂತೆ ಆಯೋಗವು ಅಧಿಕಾರಿಗಳಿಗೆ ನಿರ್ದೇಶ ನೀಡಿದೆ.
ಅತ್ಯಾಚಾರ ಮತ್ತು ಹಲ್ಲೆಗೊಳಗಾದ ಮಹಿಳೆಯರಿಗೆ 37ಲ.ರೂ.ಗಳ ಮಧ್ಯಂತರ ಪರಿಹಾರವನ್ನು ತಾನೇಕೆ ಶಿಫಾರಸು ಮಾಡಬಾರದು ಎನ್ನುವುದನ್ನು ವಿವರಿಸುವಂತೆಯೂ ಎನ್‌ಎಚ್‌ಆರ್‌ಸಿ ಸರಕಾರಕ್ಕೆ ಸೂಚಿಸಿದೆ. ಎಂಟು ಅತ್ಯಾಚಾರ ಸಂತ್ರಸ್ತೆಯರಿಗೆ ತಲಾ ಮೂರು ಲ.ರೂ.,ಲೈಂಗಿಕ ಹಲ್ಲೆಗೊಳಗಾದ ಆರು ಬಲಿಪಶುಗಳಿಗೆ ತಲಾ ಎರಡು ಲ.ರೂ. ಮತ್ತು ದೈಹಿಕ ಹಲ್ಲೆಗೊಳಗಾದ ಇಬ್ಬರಿಗೆ ತಲಾ 50,000 ರೂ.ಗಳ ಪರಿಹಾರವನ್ನು ಇದು ಒಳಗೊಂಡಿದೆ.
ರಾಜ್ಯ ಪೊಲೀಸ್ ಸಿಬ್ಬಂದಿಗಳು ತಮ್ಮಲ್ಲಿ 40 ಕ್ಕೂ ಹೆಚ್ಚಿನವರ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಕನಿಷ್ಠ ಇಬ್ಬರ ಮೇಲೆ ಸಾಮೂಹಿಕ ಅತ್ಯಚಾರ ಎಸಗಿದ್ದಾರೆ ಎಂದು ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯ ಐದು ಗ್ರಾಮಗಳ ಮಹಿಳೆಯರು ಆರೋಪಿಸಿದ್ದ ವರದಿ ಕಳೆದ ವರ್ಷದ ಸೆಪೆಂಬರ್‌ನಲ್ಲಿ ಆಂಗ್ಲ ದೈನಿಕವೊಂದರಲ್ಲಿ ಪ್ರಕಟಗೊಂಡ ನಂತರ ತಾನು ಈಬಗ್ಗೆ ತನಿಖೆಯನ್ನು ಆರಂಭಿಸಿದ್ದೆ ಎಂದು ಆಯೋಗವು ತಿಳಿಸಿದೆ.
ಗ್ರಾಮಗಳ ಮಾರ್ಗವಾಗಿ ಹಾದು ಹೋಗುತ್ತಿದ್ದ ಪೊಲೀಸ್ ಪಡೆಯು ಹಲವಾರು ಗ್ರಾಮಗಳಿಗೆ ಸೇರಿದ ಆಸ್ತಿಗಳನ್ನು ಧ್ವಂಸಗೊಳಿಸಿತ್ತು, ಅವುಗಳನ್ನು ಕಳವು ಮಾಡಿತ್ತು ಎಂದೂ ಆಂಗ್ಲ ದೈನಿಕವು ವರದಿ ಮಾಡಿತ್ತು.
ತನಿಖೆಯ ಸಂದರ್ಭ 2016,ಜ.11-14ರ ನಡುವೆ ಇತರ ಎರಡು ಗ್ರಾಮಗಳಲ್ಲಿ ಮಹಿಳೆಯರ ಮೇಲೆ ಪೊಲೀಸರು ಲೈಂಗಿಕ ದೌರ್ಜನ್ಯವೆಸಗಿದ ಇನ್ನಷ್ಟು ಘಟನೆಗಳ ಬಗ್ಗೆಯೂ ಆಯೋಗಕ್ಕೆ ದೂರು ಬಂದಿತ್ತು.