ಧೋನಿ ಒತ್ತಡಕ್ಕೆ ಮಣಿದು ನಾಯಕತ್ವ ತ್ಯಜಿಸಿದ್ದಾರೆ: ಆದಿತ್ಯ ವರ್ಮ
ರಾಂಚಿ,ಜ.8: ‘‘ಮಹೇಂದ್ರ ಸಿಂಗ್ ಧೋನಿ ಏಕದಿನ ಹಾಗೂ ಟ್ವೆಂಟಿ-20 ನಾಯಕತ್ವಕ್ಕೆ ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿರಲಿಲ್ಲ. ಒತ್ತಡಕ್ಕೆ ಮಣಿದು ಅವರು ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿದ್ದರು’’ ಎಂದು ಬಿಹಾರ ಕ್ರಿಕೆಟ್ ಸಂಸ್ಥೆ(ಬಿಸಿಎ) ಕಾರ್ಯದರ್ಶಿ ಆದಿತ್ಯ ವರ್ಮ ಆರೋಪಿಸಿದ್ದಾರೆ.
‘‘ಬಿಸಿಸಿಐ ಜೊತೆ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರು ಧೋನಿಗೆ ‘‘ಭವಿಷ್ಯದ ಕ್ರಿಕೆಟ್ ಯೋಜನೆ’’ಯ ಬಗ್ಗೆ ತಿಳಿಸಬೇಕೆಂದು ಒತ್ತಡ ಹಾಕಿದ ಕಾರಣ ನೊಂದ ‘ಕ್ಯಾಪ್ಟನ್ ಕೂಲ್’ ಧೋನಿ ನಾಯಕತ್ವವನ್ನು ದಿಢೀರನೆ ತ್ಯಜಿಸಲು ನಿರ್ಧರಿಸಿದ್ದರು’’ ಎಂದು ವರ್ಮ ಹೇಳಿದ್ದಾರೆ.
‘‘ಜ.4ರ ಸಂಜೆ ಚೌಧರಿ ಅವರು ಬಿಸಿಸಿಐ ಮುಖ್ಯ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್‌ಗೆ ಫೋನ್ ಮಾಡಿದ್ದರು. ಅದೇ ದಿನ ಸಂಜೆ ನಾಗ್ಪುರದಲ್ಲಿ ಧೋನಿಯ ಮಾರ್ಗದರ್ಶನದಲ್ಲಿ ರಣಜಿ ಸೆಮಿಫೈನಲ್‌ನಲ್ಲಿ ಆಡಿದ್ದ ಜಾರ್ಖಂಡ್ ತಂಡ ಗುಜರಾತ್‌ನ ವಿರುದ್ಧ ಸೋತಿತ್ತು. ಧೋನಿ ಮಾರ್ಗದರ್ಶನದಲ್ಲಿ ಸೆಮಿಫೈನಲ್‌ನಲ್ಲಿ ಗೆಲ್ಲುವ ಹಂತದಲ್ಲಿದ್ದ ಜಾರ್ಖಂಡ್ ತಂಡ ಪಂದ್ಯದಲ್ಲಿ ಸೋತಿರುವುದಕ್ಕೆ ಚೌಧರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಚೌಧರಿ ಮತ್ತೊಮ್ಮೆ ಪ್ರಸಾದ್‌ಗೆ ಫೋನ್ ಮಾಡಿ ಧೋನಿಯ ಕ್ರಿಕೆಟ್ ಭವಿಷ್ಯದ ಯೋಜನೆಯ ಬಗ್ಗೆ ಕೇಳುವಂತೆ ಒತ್ತಾಯಿಸಿದ್ದಾರೆ. ಇಡೀ ಎಪಿಸೋಡ್‌ನ ಬಗ್ಗೆ ಅಸಮಾಧಾನಗೊಂಡ ಧೋನಿ ತನ್ನ ರಾಜೀನಾಮೆ ಪತ್ರವನ್ನು ಕಳುಹಿಸಿಕೊಟ್ಟಿದ್ದರು’’ ಎಂದು ವರ್ಮ ಹೇಳಿದ್ದಾರೆ.
‘‘ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಕೋರಿಕೆಯ ಹೊರತಾಗಿಯೂ ಸೆಮಿಫೈನಲ್ ಆಡಲು ಧೋನಿ ನಿರಾಕರಿಸಿದ ಬಳಿಕ ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷ ಚೌಧರಿ ಹಾಗೂ ಧೋನಿಯ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ವರ್ಮ ಬೆಟ್ಟು ಮಾಡಿದರು.