ಡಿಮಿಟ್ರೊವ್‌ಗೆ ಬ್ರಿಸ್ಬೇನ್ ಸಿಂಗಲ್ಸ್ ಪ್ರಶಸ್ತಿ

Update: 2017-01-08 17:56 GMT

ಬ್ರಿಸ್ಬೇನ್(ಆಸ್ಟ್ರೇಲಿಯ), ಜ.8: ಜಪಾನ್‌ನ ವಿಶ್ವದ ನಂ.5ನೆ ಆಟಗಾರ ಕೀ ನಿಶಿಕೊರಿಗೆ ಶಾಕ್ ನೀಡಿದ ಬಲ್ಗೇರಿಯದ ಗ್ರಿಗೊರ್ ಡಿಮಿಟ್ರೊವ್ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಇಲ್ಲಿ ರವಿವಾರ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ 25ರ ಪ್ರಾಯದ ಡಿಮಿಟ್ರೊವ್ ಅವರು ನಿಶಿಕೊರಿ ಅವರನ್ನು 6-2, 2-6, 6-3 ಸೆಟ್‌ಗಳ ಅಂತರದಿಂದ ಸೋಲಿಸಿದರು. ಈ ಮೂಲಕ ಎಟಿಪಿ ಟೂರ್‌ನಲ್ಲಿ ನಾಲ್ಕನೆ ಬಾರಿ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ್ದಾರೆ.

2014ರಲ್ಲಿ ವಿಶ್ವ ರ್ಯಾಂಕಿಂಗ್‌ನಲ್ಲಿ 8ನೆ ಸ್ಥಾನಕ್ಕೇರಿದ್ದ ಡಿಮಿಟ್ರೊವ್ ಸ್ವಿಸ್‌ನ ಸೂಪರ್‌ಸ್ಟಾರ್ ರೋಜರ್ ಫೆಡರರ್ ಶೈಲಿಯಲ್ಲಿ ಆಡುವ ಕಾರಣ ಅವರನ್ನು ‘‘ಬೇಬಿ ಫೆಡ್’’ ಎಂಬ ಅಡ್ಡನಾಮ ಹೊಂದಿದ್ದಾರೆ.

 2015ರಲ್ಲಿ ಗಾಯದ ಸಮಸ್ಯೆ ಹಾಗೂ ಕಳಪೆ ಫಾರ್ಮ್ ಸಮಸ್ಯೆ ಎದುರಿಸಿದ್ದ ಡಿಮಿಟ್ರೊವ್ 2016ರ ಅಂತ್ಯದಲ್ಲಿ 17ನೆ ರ್ಯಾಂಕಿಗೆ ತಲುಪಿದ್ದ ಅವರು ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಂಡಿದ್ದರು.

 27ರ ಪ್ರಾಯದ ನಿಶಿಕೊರಿ ತನ್ನ ಆರನೆ ಪ್ರಯತ್ನದಲ್ಲಿ ಮೊದಲ ಬಾರಿ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಪ್ರಶಸ್ತಿ ಗೆಲ್ಲುವ ಫೇವರಿಟ್ ಆಟಗಾರನಾಗಿ ಫೈನಲ್‌ಗೆ ತಲುಪಿದ್ದರು. ಜಪಾನ್‌ನ ಸ್ಟಾರ್ ಆಟಗಾರ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, ಆ ಬಳಿಕ ಮೊದಲ ಸೆಟ್‌ನಲ್ಲಿ ಡಿಮಿಟ್ರೊವ್ ಮೇಲುಗೈ ಸಾಧಿಸಿದರು. 36 ನಿಮಿಷದಲ್ಲಿ ಮೊದಲ ಸೆಟ್‌ನ್ನು ಗೆದ್ದುಕೊಂಡರು.

ಆದರೆ, ಎರಡನೆ ಸೆಟ್‌ನಲ್ಲಿ ತಿರುಗೇಟು ನೀಡಿದ ನಿಶಿಕೊರಿ ಅವರು ಡಿಮಿಟ್ರೊವ್ ಅವರನ್ನು 6-2 ಅಂತರದಿಂದ ಮಣಿಸಿದರು. ಮೂರನೆ ಹಾಗೂ ಅಂತಿಮ ಸೆಟ್‌ನಲ್ಲಿ ಮತ್ತೆ ತಿರುಗಿಬಿದ್ದ ಡಿಮಿಟ್ರೊವ್ 6-3 ಅಂತರದಿಂದ ಸೆಟ್‌ನ್ನು ಗೆದ್ದುಕೊಂಡು ಚಾಂಪಿಯನ್ ಆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News