ಪ್ಯಾರಿಸ್‌ನಲ್ಲಿ ಕಿಮ್ ದರೋಡೆ; 16 ಬಂಧನ
ಪ್ಯಾರಿಸ್, ಜ. 9: ಕಳೆದ ವರ್ಷ ಅಮೆರಿಕದ ರಿಯಲಿಟಿ ಟಿವಿ ತಾರೆ ಕಿಮ್ ಕರ್ಡಾಶಿಯನ್‌ರನ್ನು ದರೋಡೆಗೈದ ಪ್ರಕರಣದಲ್ಲಿ ಫ್ರಾನ್ಸ್ ಪೊಲೀಸರು 16 ಮಂದಿಯನ್ನು ಸೋಮವಾರ ಬಂಧಿಸಿದ್ದಾರೆ.
ಕಿಮ್‌ರನ್ನು ಕಟ್ಟಿಹಾಕಿ ದರೋಡೆಗೈದ ಅವರ ನಿವಾಸದಲ್ಲಿ ಡಿಎನ್‌ಎ ಪತ್ತೆಯಾದ ಬಳಿಕ ಪ್ಯಾರಿಸ್ ಮತ್ತು ಫ್ರಾನ್ಸ್ ದಕ್ಷಿಣದ ಸ್ಥಳವೊಂದರ ಮೇಲೆ ಪೊಲೀಸರು ಮುಂಜಾನೆ ದಾಳಿ ನಡೆಸಿದರು.
ಅಕ್ಟೋಬರ್‌ನಲ್ಲಿ ನಡೆದ ದರೋಡೆಯಲ್ಲಿ 9.5 ಮಿಲಿಯ ಡಾಲರ್ (ಸುಮಾರು 65 ಕೋಟಿ ರೂಪಾಯಿ) ಬೆಲೆಯ ಚಿನ್ನಭರಣಗಳನ್ನು ದೋಚಲಾಗಿತ್ತು.
‘‘ಒಂದು ಡಿಎನ್‌ಎ ಮಾದರಿಯು ಪೊಲೀಸರಿಗೆ ಗೊತ್ತಿರುವ ದರೋಡೆಕೋರ ಹಾಗೂ ಪಾತಕ ಚಟುವಟಿಕೆಗಳನ್ನು ನಡೆಸುವ ವ್ಯಕ್ತಿಯ ಡಿಎನ್‌ಎಯೊಂದಿಗೆ ಹೋಲುತ್ತಿತ್ತು. ಆತನನ್ನು ಪ್ರಮುಖ ಪಾತಕಿಯನ್ನಾಗಿ ಪರಿಗಣಿಸಲಾಗಿದೆ’’ ಎಂದು ಮೂಲವೊಂದು ತಿಳಿಸಿದೆ.ದಾಳಿಯ ವೇಳೆ ಹಣ ಮತ್ತು ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ.
36 ವರ್ಷದ ಕರ್ಡಾಶಿಯನ್ ಮತ್ತು ಅವರ ತಂಡದ ಸದಸ್ಯರು ‘ಫ್ಯಾಶನ್ ವೀಕ್’ ಅವಧಿಯಲ್ಲಿ ಪ್ಯಾರಿಸ್‌ನ ಹೊಟೇಲೊಂದರಲ್ಲಿ ತಂಗಿದ್ದರು. ದರೋಡೆಕೋರರ ತಂಡವು ನಟಿಯನ್ನು ಕಟ್ಟಿಹಾಕಿ ಬಚ್ಚಲುಮನೆಯಲ್ಲಿ ಕೂಡಿ ಹಾಕಿತ್ತು. ಬಳಿಕ ಅದು ಆಭರಣಗಳೊಂದಿಗೆ ಪರಾರಿಯಾಗಿತ್ತು.