×
Ad

ಯಮನ್‌ನಲ್ಲಿ ಸೈನಿಕರು, ಬಂಡುಕೋರರ ನಡುವೆ ಭೀಕರ ಕಾಳಗ 68 ಸಾವು; 72 ಮಂದಿಗೆ ಗಾಯ

Update: 2017-01-09 21:19 IST

ಆ್ಯಡನ್ (ಯಮನ್), ಜ. 9: ಆಯಕಟ್ಟಿನ ಬಾಬ್ ಅಲ್ ಮನ್‌ಡಬ್ ಜಲಸಂಧಿಯ ಸಮೀಪ ಯಮನ್ ಪಡೆಗಳು ಮತ್ತು ಶಿಯಾ ಹೌದಿ ಬಂಡುಕೋರರ ನಡುವೆ ನಡೆದ ಎರಡು ದಿನಗಳ ಭೀಕರ ಕಾಳಗದಲ್ಲಿ ಕನಿಷ್ಠ 68 ಹೋರಾಟಗಾರರು ಮೃತಪಟ್ಟಿದ್ದಾರೆ ಎಂದು ಸೇನಾ ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ಕರಾವಳಿಯ ದುಬಬ್ ಜಿಲ್ಲೆಯನ್ನು ಮರುವಶಪಡಿಸಿಕೊಳ್ಳುವುದಕ್ಕಾಗಿ ಸರಕಾರಿ ಪಡೆಗಳು ಶನಿವಾರ ದಾಳಿ ಆರಂಭಿಸಿದ್ದವು.ಅಂದಿನಿಂದ ಹೋರಾಟದಲ್ಲಿ ಕನಿಷ್ಠ 55 ಹೌದಿಗಳು ಮೃತಪಟ್ಟಿದ್ದಾರೆ ಹಾಗೂ 72 ಮಂದಿ ಗಾಯಗೊಂಡಿದ್ದಾರೆ ಎಂದು ಸೇನಾ ಮತ್ತು ವೈದ್ಯಕೀಯ ಮೂಲಗಳು ಹೇಳಿವೆ.

ಈ ಕಾಳಗದಲ್ಲಿ ಓರ್ವ ಸೇನಾ ಜನರಲ್ ಸೇರಿದಂತೆ 13 ಸೈನಿಕರೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬ್ರಿಗೇಡಿಯರ್ ಜನರಲ್ ಅಬ್ದುಲ್ ಅಝೀಝ್ ಅಲ್-ಮಜೀದಿ ತಿಳಿಸಿದರು. 

ದುಬಬ್ ವಲಯದಲ್ಲಿರುವ ಪ್ರಮುಖ ಸೇನಾ ನೆಲೆಯೊಂದನ್ನು ಬಂಡುಕೋರರಿಂದ ಮರುವಶಪಡಿಸಿಕೊಳ್ಳುವ ಪ್ರಯತ್ನವನ್ನು ಯಮನ್ ಸೇನೆ ಮುಂದುವರಿಸಿದ್ದು, ಕಾಳಗ ಮುಂದುವರಿದಿದೆ.ಹೌದಿ ಬಂಡುಕೋರರು ಮತ್ತು ಮಿತ್ರ ಹೋರಾಟಗಾರರು ರವಿವಾರ ಎರಡು ಪಕ್ಷೇಪಕ ಕ್ಷಿಪಣಿಗಳನ್ನು ಸಿಡಿಸಿದರು. ಅವುಗಳನ್ನು ಯಮನ್ ಸರಕಾರಕ್ಕೆ ಬೆಂಬಲ ನೀಡುತ್ತಿರುವ ಸೌದಿ ಅರೇಬಿಯ ನೇತೃತ್ವದ ಮೈತ್ರಿಪಡೆಯು ಅರ್ಧದಲ್ಲೇ ತುಂಡರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News