ಮೆಕ್ಸಿಕೊ: ಅಮೆರಿಕ ಅಧಿಕಾರಿಯ ಮೇಲೆ ಗುಂಡು; ಅಮೆರಿಕನ್ ಬಂಧನ
Update: 2017-01-09 22:16 IST
ಗ್ವಾಡಲಜರ (ಮೆಕ್ಸಿಕೊ), ಜ. 9: ಮೆಕ್ಸಿಕೊದ ಪಶ್ಚಿಮದ ನಗರ ಗ್ವಾಡಲಜರದಲ್ಲಿ ಅಮೆರಿಕದ ಕಾನ್ಸುಲರ್ ಕಚೇರಿಯ ಅಧಿಕಾರಿಯೊಬ್ಬರಿಗೆ ಗುಂಡು ಹಾರಿಸಿದ ಶಂಕಿತ ವ್ಯಕ್ತಿಯು ಅಮೆರಿಕ ಪ್ರಜೆಯಾಗಿದ್ದಾನೆ ಹಾಗೂ ಆತನನ್ನು ಆತನ ದೇಶಕ್ಕೆ ಗಡಿಪಾರು ಮಾಡಲಾಗುವುದು ಎಂದು ಅಧಿಕಾರಿಗಳು ರವಿವಾರ ತಿಳಿಸಿದರು.
ಶಂಕಿತನ ಬಂಧನವನ್ನು ಘೋಷಿಸಿದ ಗಂಟೆಗಳ ಬಳಿಕ ಜಂಟಿ ಹೇಳಿಕೆಯೊಂದನ್ನು ನೀಡಿದ ಅಟಾರ್ನಿ ಜನರಲ್ ಕಚೇರಿ ಮತ್ತು ವಿದೇಶ ಸಚಿವಾಲಯ, ‘ಹೇಡಿತನದ ಕೃತ್ಯ’ಕ್ಕೆ ಆತ ಅಮೆರಿಕದಲ್ಲಿ ವಿಚಾರಣೆ ಎದುರಿಸಲಿದ್ದಾನೆ ಎಂದು ಹೇಳಿವೆ.
ಮೆಕ್ಸಿಕೊದ ಎರಡನೆ ಅತಿ ದೊಡ್ಡ ನಗರದ ವಾಣಿಜ್ಯ ಕೇಂದ್ರವೊಂದರ ಗರಾಜ್‌ನ ಹೊರಗಡೆ ಶುಕ್ರವಾರ ಕಪ್ಪು ಟೋಪಿ ಮತ್ತು ನೀಲಿ ನರ್ಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೋರ್ವ ಅಮೆರಿಕ ಕಾನ್ಸುಲ್ ಅಧಿಕಾರಿಯ ಮೇಲೆ ಗುಂಡಿನ ದಾಳಿ ನಡೆಸಿದ್ದನು.
ಕೃತ್ಯಕ್ಕೆ ಕಾರಣ ಅಥವಾ ಶಂಕಿತನ ಗುರುತನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.