200 ಸಿರಿಯಾ ನಿರಾಶ್ರಿತರಿಗೆ ಆಶ್ರಯ ನೀಡಿದ ಕೆನಡಾ ಉದ್ಯಮಿ ಜಿಮ್
ಟೊರಂಟೋ, ಜ.10: ಸಿರಿಯಾ ನಿರಾಶ್ರಿತರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಸುಮಾರು 200 ನಿರಾಶ್ರಿತರಿಗೆ ಆಶ್ರಯ ಒದಗಿಸಿ ಮಾನವೀಯತೆ ಮೆರೆದಿದ್ದಾರೆ ಕೆನಡಾದ ಉದ್ಯಮಿ ಜಿಮ್ ಎಸ್ಟಿಲ್‌ಲ್.
ನೈಋತ್ಯ ಒಂಟಾರಿಯೋ ಪಟ್ಟಣವಾದ ಗುವೆಲ್ಫ್ ಪಟ್ಟಣದ ನಿವಾಸಿಯಾಗಿರುವ ಜಿಮ್ ಎಸ್ಟಿಲ್‌ಲ್ ಅವರಿಗೆ 2015ರಲ್ಲಿ ಸಿರಿಯಾ ನಿರಾಶ್ರಿತರ ಸಮಸ್ಯೆಗಳ ಬಗ್ಗೆ ಓದಿ ಮನ ಕರಗಿತ್ತು. ಇವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳಾಗುತ್ತಿಲ್ಲ ಎಂದು ಅರಿತ ಅವರು ಈ ನಿರಾಶ್ರಿತರಿಗೆ ಏನಾದರೂ ಸಹಾಯ ಮಾಡಲೇಬೇಕೆಂದು ಮನಸ್ಸು ಮಾಡಿದ್ದರು. ಗೃಹೋಪಯೋಗಿ ಉಪಕರಣಗಳ ತಯಾರಿಕಾ ಸಂಸ್ಥೆ ಡ್ಯಾನ್ಬಿ ಇದರ ಸಿಇಒ ಆಗಿರುವ ಜಿಮ್ ಎಸ್ಟಿಲ್‌ಲ್ ಯೋಜನೆಯೊಂದನ್ನು ಹಾಕಿದರು. ಮೊದಲಾಗಿ 1.1 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿ ಸುಮಾರು 50 ನಿರಾಶ್ರಿತ ಕುಟುಂಬಗಳನ್ನು ಕೆನಡಾಗೆ ಕರೆಸಲು ಯೋಚಿಸಿ ಈ ಕಾರ್ಯಕ್ಕಾಗಿ ಸಮುದಾಯ ಅಭಿವೃದ್ಧಿ ಸಂಘಟನೆಗಳ ಸಹಾಯ ಯಾಚಿಸಲು ನಿರ್ಧರಿಸಿದರು.
ಸ್ವಯಂಸೇವಕರ ಸಹಾಯದಿಂದ ಹಲವು ತಂಡಗಳನ್ನು ರಚಿಸಿ ಪ್ರತಿಯೊಂದು ತಂಡವು ನಿರಾಶ್ರಿತರ ಪುನರ್ವಸತಿ ಸಂಬಂಧ ವಿವಿಧ ಕಾರ್ಯಗಳನ್ನು ನಿರ್ವಹಸಿಲು ಆರಂಭಿಸಿದವು.
ತನ್ನ ನಾಗರಿಕರಿಗೆ ಪ್ರವರ್ತಕ ಸಂಘಟನೆಗಳ ಸಹಾಯದೊಂದಿಗೆ ನಿರಾಶ್ರಿತರಿಗೆ ಸಹಾಯ ಒದಗಿಸಲು ಕೆನಡಾ ಆಡಳಿತ ಅನುವು ಮಾಡಿ ಕೊಡುತ್ತಿರುವುದು ಅವರಿಗೆ ವರದಾನವಾಗಿತ್ತು.
ಈ ಹಿಂದೆ ಬ್ಲ್ಯಾಕ್ ಬೆರ್ರಿ ಫೋನ್ ತಯಾರಿಕಾ ಸಂಸ್ಥೆ ಮೋಷನ್ ಇಲ್ಲಿ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದ ಜಿಮ್ ತಮ್ಮದೇ ಉದ್ಯಮ ಸ್ಥಾಪಿಸಿ ಯಶಸ್ಸಿನ ಉತ್ತುಂಗಕ್ಕೇರಿದವರು. ನಿರಾಶ್ರಿತರಿಗೆ ಸಹಾಯ ಮಾಡುವಲ್ಲಿಯೂ ಅವರು ದೊಡ್ಡ ಸಾಧನೆ ಮಾಡಬೇಕೆಂಬ ಇಚ್ಛೆ ಹೊಂದಿದ್ದರು.
ಸಿರಿಯಾದ ನಾಗರಿಕ ಯುದ್ಧದಲ್ಲಿ ನಿರಾಶ್ರಿತರಾದವರಿಗೆ ಸಹಾಯ ಮಾಡಲು ತುದಿಗಾಲಲ್ಲಿ ನಿಂತಿದ್ದ ಸುಮಾರು 10 ವಿವಿಧ ಧರ್ಮಾಧರಿತ ಸಂಘಟನೆಗಳನ್ನು ಒಗ್ಗೂಡಿಸಿತಮ್ಮ ಕಾರ್ಯಕ್ಕೆ ಕೈ ಹಾಕಿದರು.
ಈ ಯೋಜನೆಯ ಬಗ್ಗೆ ಸ್ಥಳೀಯ ಪತ್ರಿಕೆಯೊಂದು ನವೆಂಬರ್ 2015ರಲ್ಲಿ ಲೇಖನವೊಂದನ್ನು ಪ್ರಕಟಿಸಿತ್ತು ಇದನ್ನು ಅರಬಿಕ್ ಭಾಷೆಗೆ ಭಾಷಾಂತರಿಸಿ ವಿವಿಧೆಡೆ ವಿತರಿಸಲಾಯಿತು. ಇದರ ಪರಿಣಾಮವೆಂಬಂತೆ ಟರ್ಕಿ, ಲೆಬನಾನ್, ಸಿರಿಯಾ ಮುಂತಾಡೆಗಳಿಂದ ಜನರು ಅವರನ್ನು ಸಂಪರ್ಕಿಸಿ ಸಹಾಯ ಯಾಚಿಸಲು ಆರಂಭಿಸಿದ್ದರು.
ಹಲವಾರು ಅಡೆತಡೆಗಳ ನಡುವೆಯೂ ಆಯ್ದ 58 ಕುಟುಂಬಗಳ ಪೈಕಿ 47 ಕುಟುಂಬಗಳು ಡಿಸೆಂಬರ್ 2016ರಲ್ಲಿ ಗುವೆಲ್ಫ್ ಗೆ ಬಂದಿಳಿದವು. ತಮ್ಮ ಸಂಸ್ಥೆಯಲ್ಲಿ ನಿರಾಶ್ರಿತರಿಗೆ ಉದ್ಯೋಗ ಒದಗಿಸುವ ಯೋಜನೆ, ಅವರಿಗೆ ಇಂಗ್ಲಿಷ್ ಕಲಿಸುವ ಕಾರ್ಯಕ್ರಮ ಹಮ್ಮಿಕೊಂಡ ಅವರು ಹಲವರಿಗೆ ತಮ್ಮದೇ ಉದ್ಯಮ ಸ್ಥಾಪಿಸಲು ಸಹಾಯ ಮಾಡಲು ಮುಂದಾದರು. ಇಲ್ಲಿಯ ತನಕ ಅವರು ಸುಮಾರು 200 ನಿರಾಶ್ರಿತರಿಗೆ ಸಹಾಯ ಮಾಡಿದ್ದಾರೆ.
ನನ್ನಲ್ಲಿ ಸಹಾಯ ಮಾಡುವ ಮನಸ್ಸಿದೆ, ಅದಕ್ಕೆ ತಕ್ಕಂತೆ ಸಂಪನ್ಮೂಲಗಳೂ ಇವೆ ಹಾಗೂ ಯೋಜನೆ ಕಾರ್ಯಗತಗೊಳಿಸುವ ಕಳಕಳಿಯೂ ಇದೆ ಎಂದು ಹೇಳುತ್ತಾರೆ ಎಸ್ಟಿಲ್‌ಲ್.
ತಾವು ಚಿಕ್ಕವರಿದ್ದಾಗ ತಮ್ಮ ಹೆತ್ತವರು ಇಬ್ಬರು ಉಗಾಂಡದ ನಿರಾಶ್ರಿತರಿಗೆ ಸಹಾಯ ಮಾಡಿದ್ದು ತನ್ನ ಮೇಲೆ ಪ್ರಭಾವ ಬೀರಿತ್ತು ಎಂದು ಅವರು ನೆನಪಿಸುತ್ತಾರೆ.