ಬ್ರಿಟನ್: ಭಾರತೀಯ ರೆಸ್ಟೋರೆಂಟ್‌ನ ಊಟ ಮಾಡಿದ ಬಾಲಕಿ ಮೃತ
ಲಂಡನ್, ಜ. 10: ಬ್ರಿಟನ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್‌ನಿಂದ ಖರೀದಿಸಿದ ಊಟವನ್ನು ಮಾಡಿದ 15 ವರ್ಷದ ಬಾಲಕಿಯೊಬ್ಬರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.
ಲ್ಯಾಂಕಾಶಯರ್‌ನ ಓಸ್ವಾಲ್ಡ್‌ವಿಸಲ್‌ನಲ್ಲಿರುವ ರಾಯಲ್ ಸ್ಪೈಸ್ ರೆಸ್ಟರಾಂಟ್‌ನಿಂದ ಮೇಗನ್ ಲೀ ಭಾರತೀಯ ಊಟವನ್ನು ಕಟ್ಟಿಕೊಂಡು ಹೋಗಿ ಮನೆಯಲ್ಲಿ ಊಟಮಾಡಿದ್ದರು. ಊಟ ಮಾಡಿದ ಬಳಿಕ ಆಕೆ ಗಂಭೀರ ಅಲರ್ಜಿಗೆ ತುತ್ತಾದರು.
ಅವರನ್ನು ರಾಯಲ್ ಬ್ಲಾಕ್‌ಬರ್ನ್ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಎರಡು ದಿನಗಳ ಬಳಿಕ ಹೊಸ ವರ್ಷಾಚರಣೆಯ ದಿನದಂದು ಅವರು ಕೊನೆಯುಸಿರೆಳೆದರು.
‘‘ಭಾರತೀಯ ರೆಸ್ಟೋರೆಂಟ್‌ನಿಂದ ಖೀರಿದಿಸಿದ ಆಹಾರವನ್ನು ಮೇಗನ್ ಲೀ ತಿಂದಿದ್ದರು. ಬಳಿಕ ಅವರು ಅಲರ್ಜಿಗೆ ತುತ್ತಾದರು. ನಿರ್ಲಕ್ಷದಿಂದ ಸಾವಿಗೆ ಕಾರಣರಾದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಅವರೀಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ’’ ಎಂದು ಲ್ಯಾಂಕಾಶಯರ್ ಪೊಲೀಸರು ಹೇಳಿದ್ದಾರೆ ಎಂದು ‘ಗಾರ್ಡಿಯನ್’ ವರದಿ ಮಾಡಿದೆ.
ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ, ಆದರೆ ಸಂಪೂರ್ಣ ಫಲಿತಾಂಶವು ‘ಸ್ವಲ್ಪ ಸಮಯ ಗೊತ್ತಾಗುವುದಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.