×
Ad

ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಅಂತಿಮ ಕ್ಷಣದ ಕಸರತ್ತು : ರಾಹುಲ್ ನಿರ್ಧಾರಕ್ಕೆ ಕಾಯುತ್ತಿದೆ ಪಂಜಾಬ್ ಕಾಂಗ್ರೆಸ್

Update: 2017-01-10 19:21 IST

ಅಮೃತಸರ, ಜ.10: ವಿದೇಶದಲ್ಲಿ ರಜೆ ಮುಗಿಸಿ ವಾಪಸಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಂದು ಪಂಜಾಬ್ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಲಿದ್ದು ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ. ವಿಧಾನಸಭೆಯ 117 ಸ್ಥಾನಗಳ ಪೈಕಿ 40 ಸ್ಥಾನಗಳ ಅಭ್ಯರ್ಥಿಗಳ ಆಯ್ಕೆ ಈಗ ಪಕ್ಷಕ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ಈಗಾಗಲೇ ಬಿಜೆಪಿ ತೊರೆದಿರುವ ನವಜೋತ್ ಸಿಂಗ್ ಸಿದ್ದು ಅವರ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಿದ್ದವಾಗಿರುವಂತೆಯೇ, ಇವರು ವಿಧಿಸಿರುವ ಕೆಲವು ಷರತ್ತುಗಳು ಪಕ್ಷದ ಅಭ್ಯರ್ಥಿಗಳ ಬಿಡುಗಡೆಗೆ ಬಹುದೊಡ್ಡ ತೊಡಕಾಗಿದೆ ಎನ್ನಲಾಗುತ್ತಿದೆ. ತನ್ನೊಂದಿಗೆ, ಈಗಾಗಲೇ ಕಾಂಗ್ರೆಸ್ ಸೇರಿರುವ ಪತ್ನಿ ನವಜೋತ್ ಕೌರ್‌ಗೆ ಮತ್ತು ಕನಿಷ್ಟ ಐವರು ಸಹವರ್ತಿಗಳಿಗೆ ಟಿಕೆಟ್ ಸಿಗಬೇಕೆಂಬುದು ಸಿದ್ದು ಇರಾದೆಯಾಗಿದೆ ಎನ್ನಲಾಗುತ್ತಿದೆ. ಈ ಹಿಂದೆ ತಾನು ಬಿಜೆಪಿ ಸದಸ್ಯನಾಗಿ ಪ್ರತಿನಿಧಿಸಿ, ಬಳಿಕ ರಾಜೀನಾಮೆ ನೀಡಿದ್ದ ಅಮೃತಸರ ಲೋಕಸಭಾ ಸ್ಥಾನಕ್ಕೆ ಚುನಾವಣೆ ನಡೆಯುವಾಗ ತನಗೇ ಅಲ್ಲಿ ಟಿಕೆಟ್ ಸಿಗಬೇಕು ಎಂಬುದು ಸಿದ್ದು ಅವರ ಇನ್ನೊಂದು ಷರತ್ತಾಗಿದೆ.

ಇದು ಕಾಂಗ್ರೆಸ್‌ಗೆ ಉಸಿರು ಕಟ್ಟಿಸುವ ಷರತ್ತಾಗಿದೆ. ಈಗಾಗಲೇ ಈ 40 ಸ್ಥಾನಗಳಿಗೆ ಕನಿಷ್ಠ 80 ಮಂದಿ ಆಕಾಂಕ್ಷಿಗಳಿದ್ದಾರೆ. ಈ ಪಟ್ಟಿಗೆ ಹೊಸತಾಗಿ ಐವರು ಸಿದ್ದು ಬೆಂಬಲಿಗರ ಹೆಸರು ಸೇರಿಕೊಂಡರೆ ಮತ್ತಷ್ಟು ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಲಿದೆ. ಟಿಕೆಟ್ ಸಿಗದೆ ನಿರಾಶೆಗೊಳಗಾದವರು ಬಂಡಾಯವಾಗಿ ಸ್ಫರ್ಧಿಸುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು.

ಆರಂಭದಲ್ಲಿ 18 ಟಿಕೆಟ್ ಸಿಗಬೇಕೆಂದು ಒತ್ತಾಯಿಸಿದ್ದ ಸಿದ್ದುಗೆ ಅಮೃತಸರ ಪೂರ್ವ ವಿಧಾನಸಭೆ ಸ್ಥಾನಕ್ಕೆ ಟಿಕೇಟು, ಮತ್ತು ಪಕ್ಷ ಗೆದ್ದರೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಭರವಸೆ ದೊರಕಿತ್ತು ಮತ್ತು ಇದಕ್ಕವರು ಒಪ್ಪಿದ್ದರು ಎನ್ನಲಾಗಿದೆ. ಆದರೆ ಈಗ ಅವರು ಇನ್ನಷ್ಟು ನಿರೀಕ್ಷೆಯಲ್ಲಿದ್ದಾರೆ. ಆಪ್ ಪಕ್ಷವೂ ಕೂಡಾ ಉಪಮುಖ್ಯಮಂತ್ರಿ ಹುದ್ದೆಯ ಕೊಡುಗೆ ನೀಡಿತ್ತು. ಅದನ್ನು ತಳ್ಳಿಹಾಕಿ ಕಾಂಗ್ರೆಸ್‌ನತ್ತ ಬರುತ್ತಿದ್ದೇವೆ. ಆದ್ದರಿಂದ ಇನ್ನಷ್ಟು ‘ಕೊಡುಗೆ’ ಸಿಗಬೇಕು ಎನ್ನುವುದು ಸಿದ್ದು ಮತ್ತವರ ಬೆಂಬಲಿಗರ ವಾದವಾಗಿದೆ. ಕಳೆದ ವರ್ಷದ ಜುಲೈಯಲ್ಲಿ ಬಿಜೆಪಿ ತೊರೆದಿದ್ದ ಸಿದ್ದು ಆ ಬಳಿಕ ತನ್ನ ಮುಂದಿನ ರಾಜಕೀಯ ನೆಲೆಗಾಗಿ ಆಪ್ ಮತ್ತು ಕಾಂಗ್ರೆಸ್ ಪಕ್ಷದೊಡನೆ ಚೌಕಾಷಿ ಮಾಡುತ್ತಲೇ ಬಂದಿದ್ದಾರೆ. ಪಂಜಾಬಿನಲ್ಲಿ ಚುನಾವಣೆ ಸಿದ್ಧತೆಯಲ್ಲಿ ಕಾಂಗ್ರೆಸ್‌ಗಿಂತ ಸಾಕಷ್ಟು ಮುಂದಿರುವ ಬಿಜೆಪಿ ಮತ್ತು ಆಪ್ ಪಕ್ಷ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿಯಾಗಿದೆ. ಕಾಂಗ್ರೆಸ ಪಕ್ಷ ಸೋಮವಾರವಷ್ಟೇ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಫೆ.4ರಂದು ಪಂಜಾಬಿನಲ್ಲಿ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News