ಸಿರಿಯದಲಿ ಅಮೆರಿಕ ಪಡೆಗಳಿಂದ ಭೂ ಕಾರ್ಯಾಚರಣೆ
ವಾಶಿಂಗ್ಟನ್, ಜ. 10: ಅಮೆರಿಕದ ವಿಶೇಷ ಕಾರ್ಯಾಚರಣೆ ಪಡೆಗಳು ಪೂರ್ವ ಸಿರಿಯದಲ್ಲಿ ಐಸಿಸ್ ಭಯೋತ್ಪಾದಕರನ್ನು ಗುರಿಯಾಗಿಸಿ ಭೂ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಅಮೆರಿಕದ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಡೇರ್ ಅಲ್ ಝೂರ್ ನಗರದ ಸಮೀಪ ಯೂಫ್ರಟಿಸ್ ನದಿಯ ಗುಂಟ ಇರುವ ಸಣ್ಣ ಪಟ್ಟಣದ ಸಮೀಪ ಅಮೆರಿಕದ ಪಡೆಗಳು ರವಿವಾರ ದಾಳಿ ನಡೆಸಿವೆ. ಇದು ಐಸಿಸ್ ಭಯೋತ್ಪಾದಕರ ನೆಲೆಯಾಗಿದೆ.
ಹೆಲಿಕಾಪ್ಟರ್‌ಗಳಲ್ಲಿ ಬಂದ ಪಡೆಗಳು ಈ ಪ್ರದೇಶದಲ್ಲಿ 90 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿದವು. ಬಳಿಕ ಬಂಧಿತ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಹಾಗೂ ಅವರ ಮೃತದೇಹಗಳೊಂದಿಗೆ ಸ್ಥಳದಿಂದ ತೆರಳಿದವು ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಡೇರ್ ಅಲ್ ಝೂರ್ 24’ ವೆಬ್‌ಸೈಟ್‌ಗೆ ತಿಳಿಸಿವೆ.
ಐಸಿಸ್ ಭಯೋತ್ಪಾದಕನೊಬ್ಬನನ್ನು ಸಾಗಿಸುತ್ತಿದ್ದ ವಾಹನವೊಂದನ್ನು ತಡೆ ಹಿಡಿದ ಅಮೆರಿಕದ ಪಡೆಗಳು, ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದವು ಎಂದು ವಾಶಿಂಗ್ಟನ್‌ನಲ್ಲಿರುವ ಅಮೆರಿಕದ ರಕ್ಷಣಾ ಅಧಿಕಾರಿಗಳು ತಿಳಿಸಿದರು.
ಕಾರ್ಯಾಚರಣೆಯಲ್ಲಿ 25 ಐಸಿಸ್ ಭಯೋತ್ಪಾದಕರು ಹತರಾದರು ಎಂದು ಬ್ರಿಟನ್‌ನಲ್ಲಿ ನೆಲೆ ಹೊಂದಿರುವ ಸಿರಿಯ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.