ಹೊಗೆಬತ್ತಿ ಸೇವನೆಯಿಂದ ಜಾಗತಿಕ ಆರ್ಥಿಕತೆಗೆ 68 ಲಕ್ಷ ಕೋಟಿ ರೂ. ಹೊಡೆತ
ಜಿನೇವ, ಜ. 10: ಹೊಗೆಬತ್ತಿ ಸೇವನೆಗಾಗಿ ಜಾಗತಿಕ ಆರ್ಥಿಕತೆಯು ವಾರ್ಷಿಕ ಒಂದು ಟ್ರಿಲಿಯ ಡಾಲರ್ (ಸುಮಾರು 68 ಲಕ್ಷ ಕೋಟಿ ರೂಪಾಯಿ) ಬೆಲೆ ತೆರುತ್ತಿದೆ ಹಾಗೂ ಈ ಚಟವು 2030ರ ವೇಳೆಗೆ ಈಗಿನ ಪ್ರಮಾಣಕ್ಕಿಂತ ಮೂರನೆ ಒಂದು ಭಾಗ ಹೆಚ್ಚು ಜನರನ್ನು ಕೊಲ್ಲುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುಎಸ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಗಳು ಮಂಗಳವಾರ ಪ್ರಕಟಿಸಿರುವ ಜಂಟಿ ಅಧ್ಯಯನವೊಂದು ತಿಳಿಸಿದೆ.
ಈ ವೆಚ್ಚವು ತಂಬಾಕು ತೆರಿಗೆಯಿಂದ ಬರುವ ಜಾಗತಿಕ ಆದಾಯಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2013-14ರ ಸಾಲಿನಲ್ಲಿ ತಂಬಾಕು ಮಾರಾಟದ ತೆರಿಗೆಯಿಂದ ಬಂದಿರುವ ಜಾಗತಿಕ ಆದಾಯ 269 ಬಿಲಿಯ ಡಾಲರ್ (18.34 ಲಕ್ಷ ಕೋಟಿ ರೂಪಾಯಿ).
‘‘ತಂಬಾಕು ಸಂಬಂಧಿ ಸಾವುಗಳ ಸಂಖ್ಯೆಯು ವಾರ್ಷಿಕ ಸುಮಾರು 60 ಲಕ್ಷದಿಂದ 2030ರ ವೇಳೆಗೆ 80 ಲಕ್ಷಕ್ಕೆ ಏರಲಿದೆ. ಈ ಪೈಕಿ 80 ಶೇಕಡಕ್ಕಿಂತಲೂ ಅಧಿಕ ಸಾವುಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಸಂಭವಿಸುತ್ತವೆ’’ ಎಂದು ವರದಿ ಹೇಳಿದೆ.
ಹೊಗೆಬತ್ತಿ ಸೇವನೆಗಾರರ ಪೈಕಿ 80 ಶೇಕಡ ಇಂಥ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಹೊಗೆಬತ್ತಿ ಸೇವನೆ ಪ್ರಮಾಣ ಕಡಿಮೆಯಾದರೂ, ಸೇವಿಸುವವರ ಸಂಖ್ಯೆಯು ಹೆಚ್ಚುತ್ತಿದೆ ಎಂದಿದೆ.
ತಂಬಾಕು ಬಳಕೆಯು ಜಾಗತಿಕವಾಗಿ ಸಾವಿನ ಅತ್ಯಂತ ದೊಡ್ಡ ಕಾರಣವಾಗಿದೆ ಎಂದು ಆರೋಗ್ಯ ಪರಿಣತರು ಹೇಳುತ್ತಾರೆ.