‘‘ಅಮಾನವೀಯ ನೋಟು ರದ್ದತಿಯಿಂದ ಭಾರತೀಯರ ಬದುಕು ದುಸ್ತರ’’

Update: 2017-01-11 08:22 GMT

ನ್ಯೂಯಾರ್ಕ್, ಜ.11: ಅಮಾನವೀಯವಾಗಿ ಯೋಜಿತವಾಗಿ ಜಾರಿಯಾದ ನೋಟು ರದ್ದತಿ ಹಾಗೂ ನಂತರದ ನಗದು ಕೊರತೆಯ ಸಮಸ್ಯೆ ಭಾರತೀಯರ ಬದುಕನ್ನು ದುಸ್ತರಗೊಳಿಸಿದೆ ಎಂದು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ತನ್ನ ಸೋಮವಾರದ ಸಂಪಾದಕೀಯದಲ್ಲಿ ಹೇಳಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ.

ಕಾಳಧನ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ಹೇಳಿದ್ದರೆ ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಲಾಗಿದೆ ಎಂಬುದಕ್ಕೆಸಾಕಷ್ಟು ಪುರಾವೆಗಳಿಲ್ಲ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

‘‘ಭಾರತ ಸರಕಾರವುದೊಡ್ಡ ಮುಖಬೆಲೆಯ ಹಾಗೂ ಚಲಾವಣೆಯಲ್ಲಿರುವ ಅತ್ಯಧಿಕ ನೋಟುಗಳನ್ನು ಹಿಂಪಡೆದು ಹೊಸ ನೋಟುಗಳನ್ನು ಚಲಾವಣೆಗೆ ತಂದು ಎರಡು ತಿಂಗಳಾದರೂ ದೇಶದ ಆರ್ಥಿಕತೆ ಇನ್ನೂ ಸಮಸ್ಯೆಯೆದುರಿಸುತ್ತಿದೆ’’ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

‘‘ಉತ್ಪಾದನಾ ರಂಗ ಕುಸಿಯುತ್ತಿದೆ, ರಿಯಲ್ ಎಸ್ಟೇಟ್ ಮತ್ತು ಕಾರು ಮಾರಾಟ ಕಡಿಮೆಯಾಗಿದೆ, ನಗದು ಕೊರತೆಯಿಂದ ತಮಗೆ ತೀವ್ರ ತೊಂದರೆಯಾಗಿದೆ ಎಂದು ಕೃಷಿ ಕಾರ್ಮಿಕರು, ಅಂಗಡಿ ಮಾಲಕರು ಹಾಗೂ ಇತರ ಭಾರತೀಯರು ಹೇಳುತ್ತಿದ್ದಾರೆ,’’ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.

‘‘ಇಡೀ ಯೋಜನೆಯನ್ನು ಸರಿಯಾಗಿ ಯೋಚಿಸದೆ ಜಾರಿ ಮಾಡಲಾಗಿದೆ. ಭಾರತೀಯರು ಬ್ಯಾಂಕುಗಳ ಹೊರಗೆ ಹಣ ಠೇವಣಿಯಿಡಲು ಹಾಗೂ ಹಿಂದಕ್ಕೆ ಪಡೆಯಲು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವಂತಾಗಿದೆ. ಹೊಸ ನೋಟುಗಳ ಕೊರತೆಯಿದೆ. ಸರಕಾರ ಸಾಕಷ್ಟು ನೋಟುಗಳನ್ನು ಮುಂಚಿತವಾಗಿಯೇ ಮುದ್ರಿಸಿಲ್ಲ. ಸಣ್ಣ ನಗರಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಗದು ಕೊರತೆ ತೀವ್ರವಾಗಿದೆ. ಚಲಾವಣೆಯಲ್ಲಿರುವ ನಗದು ಅರ್ಧಕ್ಕೂ ಕಡಿಮೆಯಾಯಿತು. ನವೆಂಬರ್ 4ರಂದು ಚಲಾವಣೆಯಲ್ಲಿದ್ದ 17.7 ಟ್ರಿಲಿಯನ್ ರೂಪಾಯಿ ಡಿಸೆಂಬರ್ 9ಕ್ಕೆ 9.2 ಟ್ರಿಲಿಯನ್‌ ರೂಪಾಯಿಗಳಿಗಿಳಿಯಿತು ಎಂದು ರಿಸರ್ವ್ ಬ್ಯಾಂಕ್ ನೀಡಿದ ಅಂಕಿಅಂಶಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

‘‘ದೇಶದ ಶೇ.98ರಷ್ಟು ಮಂದಿ ನಗದು ವಹಿವಾಟು ನಡೆಸುವ ದೇಶವಾದ ಭಾರತದಲ್ಲಿಇಷ್ಟೊಂದು ಸಂಖ್ಯೆಯ ನೋಟುಗಳನ್ನು ಕೆಲವೇ ವಾರಗಳಲ್ಲಿ ಚಲಾವಣೆಯಿಂದ ಹಿಂದೆಗೆದುಕೊಳ್ಳುವ ಕಾರ್ಯವನ್ನು ಯಾವ ದೇಶವೂ ಮಾಡಲಿಕ್ಕಿಲ್ಲ. ಹೆಚ್ಚು ಹೆಚ್ಚು ಜನರ ಬಳಿ ಡೆಬಿಟ್ ಕಾರ್ಡುಗಳು ಹಾಗೂ ಮೊಬೈಲ್ ಫೋನುಗಳಿದ್ದರೂ ಹೆಚ್ಚಿನ ವರ್ತಕರು ಇ-ಪೇಮೆಂಟ್ ಸ್ವೀಕರಿಸುವ ವ್ಯವಸ್ಥೆ ಹೊಂದಿಲ್ಲ’’ ಎಂದು ಹೇಳಿದೆ.

"ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿಯಿರಿಸಲು ತರುವವರು ತಾವು ತೆರಿಗೆ ಪಾವತಿಸಿರುವುದಕ್ಕೆ ದಾಖಲೆ ಒದಗಿಸಬೇಕೆಂದು ಸರಕಾರ ಹೇಳಿತ್ತು. ಇದರಿಂದಾಗಿ ಕಪ್ಪು ಹಣ ಬ್ಯಾಂಕುಗಳನ್ನು ತಲುಪಲಿಕ್ಕಿಲ್ಲವೆಂಬುದು ಸರಕಾರದ ಯೋಚನೆಯಾಗಿತ್ತು.  ಆದರೆ ವರದಿಗಳ ಪ್ರಕಾರ ಹೆಚ್ಚಿನ ಅಮಾನ್ಯಗೊಂಡ ನೋಟುಗಳನ್ನುಭಾರತೀಯರು ಬ್ಯಾಂಕುಗಳಿಗೆ ಹಿಂದಿರುಗಿಸಿದ್ದಾರೆ. ಇದರರ್ಥ ಒಂದೋ ಸರಕಾರ ಅಂದಾಜಿಸಿದಷ್ಟು ಕಾಳಧನ ಚಲಾವಣೆಯಲ್ಲಿರಲಿಲ್ಲ ಇಲ್ಲವೇಸರಕಾರ ವಾದಿಸಿದ ಹಾಗೆ ವಾಮ ಮಾರ್ಗಗಳ ಮೂಲಕ ಕೆಲವರು ತಮ್ಮ ಬಳಿಯಿದ್ದ ಕಪ್ಪು ಹಣವನ್ನು ಬ್ಯಾಂಕುಗಳಿಗೆ ಹಿಂದಿರುಗಿಸಿದ್ದಾರೆ’’ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

‘‘ಭ್ರಷ್ಟಾಚಾರದ ವಿರುದ್ಧ ಹೋರಾಟಲು ತಾವು ಸ್ವಲ್ಪ ಕಷ್ಟ ಸಹಿಸಲು ಸಿದ್ಧರಿದ್ದೇವೆ ಎಂದು ಬಹಳಷ್ಟು ಭಾರತೀಯರು ಹೇಳಿದ್ದಾರೆ. ಆದರೆ ನಗದು ಕೊರತೆ ಇನ್ನೂ ಬಹಳ ಕಾಲ ಮುಂದುವರಿದರೆ ಹಾಗೂ ಭ್ರಷ್ಟಾಚಾರ ಹಾಗೂ ತೆರಿಗೆ ವಂಚನೆ ಕಡಿಮೆಯಾಗದೇ ಇದ್ದಲ್ಲಿ ಅವರು ಅಷ್ಟರವರೆಗೆ ಸಹನೆಯಿಂದಿರಲು ಸಾಧ್ಯವಿಲ್ಲ ಎಂದು ಬಹಳಷ್ಟು ಅರ್ಥ ಶಾಸ್ತ್ರಜ್ಞರುಭವಿಷ್ಯ ನುಡಿದ್ದಿದ್ದಾರೆ’’ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News