ಅಮೆಝಾನ್ ವಿರುದ್ಧ ಹರಿಹಾಯ್ದ ಸುಷ್ಮಾ

Update: 2017-01-11 15:34 GMT

ಹೊಸದಿಲ್ಲಿ, ಜ. 11 : ಬೃಹತ್ ಇ ಮಾರಾಟ ಕಂಪೆನಿ ಅಮೆಝಾನ್ ವಿರುದ್ಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಹರಿಹಾಯ್ದಿದ್ದಾರೆ. ಇದಕ್ಕೆ ಕಾರಣ ತನ್ನ ವೆಬ್ ಸೈಟ್ ನಲ್ಲಿ ಅಮೆಝಾನ್ ಭಾರತೀಯ ರಾಷ್ಟ್ರ ಧ್ವಜವನ್ನು ಅವಮಾನಿಸಿದ್ದು. ಇದಕ್ಕಾಗಿ ತಕ್ಷಣ ನಿಶ್ಶರ್ಥ ಕ್ಷಮೆ ಯಾಚಿಸದಿದ್ದರೆ ಕಂಪೆನಿಯ ಯಾವುದೇ ಅಧಿಕಾರಿಗಳಿಗೆ ವೀಸಾ ನೀಡುವುದಿಲ್ಲ ಎಂದು ಸುಷ್ಮಾ ಎಚ್ಚರಿಕೆ ನೀಡಿದ್ದಾರೆ. ಇದೆಲ್ಲವೂ ಟ್ವಿಟ್ಟರ್ ನಲ್ಲೇ ನಡೆದಿರುವುದು ವಿಶೇಷ. 
ಅತುಲ್ ಭೋಬಿ ಎಂಬವರು ಟ್ವೀಟ್ ಮಾಡಿ " ಅಮೆಝಾನ್ ಕೆನಡ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರು ತ್ರಿವರ್ಣ ಧ್ವಜದ ಡೋರ್ ಮ್ಯಾಟ್ ಗಳನ್ನು ಮಾರಾಟ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ದಯವಿಟ್ಟು ಕ್ರಮ ಕೈಗೊಳ್ಳಿ " ಎಂದು ಸುಷ್ಮಾ ಅವರನ್ನು ವಿನಂತಿಸಿದ್ದರು. 

ದಿಲ್ಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಷ್ಮಾ  ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿ " ಅಮೆಝಾನ್ ತಕ್ಷಣ ನಿಶ್ಶರ್ಥ ಕ್ಷಮೆ ಯಾಚಿಸಬೇಕು. ತ್ರಿವರ್ಣ ಧ್ವಜವನ್ನು ಅವಮಾನಿಸುವ ಎಲ್ಲ ಉತ್ಪನ್ನಗಳನ್ನು ಹಿಂದೆಗೆದುಕೊಳ್ಳಬೇಕು. ಇದಾಗದಿದ್ದರೆ ಇನ್ನು ಮುಂದೆ ಅಮೆಝಾನ್ ನ ಯಾವುದೇ ಪ್ರತಿನಿಧಿಗೆ ಭಾರತ ವೀಸಾ ನೀಡುವುದಿಲ್ಲ . ಈಗಾಗಲೇ ನೀಡಿದ್ದನ್ನು ರದ್ದು ಪಡಿಸಲಾಗುವುದು  " ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. 

ಇಷ್ಟಕ್ಕೆ ನಿಲ್ಲದ ಸುಷ್ಮಾ , ಕೆನಡಾದ ಭಾರತೀಯ ರಾಯಭಾರ ಕಚೇರಿಗೆ ಟ್ವೀಟ್ ಮಾಡಿ " ಇದು ಸ್ವೀಕಾರಾರ್ಹವಲ್ಲ. ಇದನ್ನು ತಕ್ಷಣ ಅಮೆಝಾನ್ ನ ಅತ್ಯುನ್ನತ ಮಟ್ಟದಲ್ಲಿ ವಿಚಾರಿಸಿ " ಎಂದೂ ಟ್ವೀಟ್ ಮಾಡಿದ್ದಾರೆ. 
ಅಮೆಝಾನ್ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News